ಐಟಿಸಿ ಮತ್ತು ಮೈಕ್ಯಾಪ್ಸ್ ಸಂಸ್ಥೆ ವತಿಯಿಂದ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ, ಕೃಷಿ, ತೋಟಗಾರಿಕೆ ಹಾಗು ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಪ್ರಗತಿಪರ ರೈತರೊಂದಿಗೆ ಆಯೋಜಿಸಿದ್ದ ಪಾಲುದಾರರ ಸಭೆಯಲ್ಲಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರದ ಕಾರ್ಯಕ್ರಮಗಳ ಜತೆಗೆ ಸಮುದಾಯದ ಅಭಿವೃದ್ಧಿಗಾಗಿ ಐಟಿಸಿ ಸಹಭಾಗಿತ್ವದಲ್ಲಿ ಮೈಕ್ಯಾಪ್ಸ್ ಸಂಸ್ಥೆ ಕೆರೆಗಳ ಹೂಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣ, ಗಿಡಗಳನ್ನು ಬೆಳೆಸುವುದು, ಶಾಲೆ ಹಾಗೂ ಅಂಗನವಾಡಿಗಳಿಗೆ ಕಾಂಪೌಂಡ್, ಶೌಚಗೃಹಗಳ ನಿರ್ಮಾಣದೊಂದಿಗೆ ಕಸ ವಿಲೇವಾರಿ ಮತ್ತು ನೈರ್ಮಲ್ಯದ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಮೈಕ್ಯಾಪ್ಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಫುಲ್ ಹಸನ್ ಮಾತನಾಡಿ, ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸರ್ಕಾರಿ ಸಂಸ್ಥೆ ಜತೆಗೂಡಿ ಕರ್ತವ್ಯ ನಿರ್ವಹಿಸುವುದೇ ಐಟಿಸಿ ಮತ್ತು ಮೈಕ್ಯಾಪ್ಸ್ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಮೈರಾಡ ಸಂಸ್ಥೆಯು ಕಳೆದ 55 ವರ್ಷಗಳಿಂದ ಮಣ್ಣು, ನೀರು ಸಂರಕ್ಷಣೆ ಹಾಗೂ ಸಮುದಾಯ ಅಭಿವೃದ್ಧಿ ಕೆಲಸಗಳನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜಿಸುತ್ತಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಸುಮಾ ಮಾತನಾಡಿ, ರೈತರು ತಮ್ಮ ಬೆಳೆಗಳನ್ನು ಬೆಳೆಯಲು ಹೆಚ್ಚು ರಾಸಾಯನಿಕ ಗೊಬ್ಬರ ಬಳಸದೆ ಸುಸ್ಥಿರ ಹಾಗೂ ಸಾವಯವ ಕೃಷಿಗೆ ಒತ್ತು ನೀಡಬೇಕು. ಇಲಾಖೆ ವತಿಯಿಂದ ರೈತರಿಗೆ ಸಿಗುವ ಸಬ್ಸಿಡಿ ದರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಸರ್ಕಾರಿ ಇತರ ಸಂಸ್ಥೆಗಳು ರೈತರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಯೋಜನೆಗಳ ಪೂರ್ಣ ಮಾಹಿತಿ ಪಡೆದು ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಶು ಇಲಾಖೆ ಹಿರಿಯ ಪಶು ವೈದ್ಯಾಧಿಕಾರಿ ಡಾ.ನಂಜೇಶ್ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಇಲಾಖೆ ವತಿಯಿಂದ ರೈತರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಇದೆ ವೇಳೆ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಾಗೂ ಇಲಾಖೆಗಳಿಂದ ದೊರೆಯುವ ಸವಲತ್ತುಗಳ ಮಾಹಿತಿ ಪಡೆದುಕೊಂಡರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮೋಹನ್ ಕುಮಾರ್, ಚೇತನ್, ಹರೀಶ್, ಅವಿನಾಶ್, ಮೈಕ್ಯಾಪ್ಸ್ ಸಂಸ್ಥೆ ಕಾರ್ಯಕ್ರಮ ಸಮನ್ವಯಾಧಿಕಾರಿ ರಾಜಪ್ಪ, ಕೃಷಿ ಅಧಿಕಾರಿ ವೀಣಾ, ವಿಸ್ತರಣಾಧಿಕಾರಿಗಳಾದ ಕಾರ್ತಿಕ್, ಕೃಷ್ಣಾಚಾರಿ, ಚಂದ್ರಪ್ಪ, ಸತೀಶ್ ಆರಾಧ್ಯ, ಸಂಜಯ್ ಇತರರು ಇದ್ದರು.