ಮಧುಗಿರಿ: ತಾಲೂಕಿನಲ್ಲಿ ಅನ್ಯ ರಾಜ್ಯದ, ಅನ್ಯ ಧರ್ಮಿಯರು ಸೆಲೂನ್ ತೆರೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಸವಿತಾ ಸಮಾಜದ ಮುಖಂಡರು ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಧುಗಿರಿ ತಾಲೂಕು ಸವಿತಾ ಸಮಾಜದ ಮುಖಂಡರು ಶಾಸಕ ರಾಜಣ್ಣ ಅವರನ್ನು ಭೇಟಿ ಮಾಡಿ, ನಾವು ವಂಶ ಪಾರಂಪರ್ಯವಾಗಿ ಕುಲವೃತ್ತಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದು, ಈಗ ಅನ್ಯ ರಾಜ್ಯದವರು ಮಧುಗಿರಿಗೆ ಬಂದು ಸಲೂನ್ ಅಂಗಡಿ ತೆರೆಯುತ್ತಿದ್ದಾರೆ. ಇದರಿಂದ ಕುಲ ಕಸುಬನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ನಮ್ಮ ಕುಟುಂಬ ಬೀದಿಗೆ ಬರುತ್ತದೆ. ಆದ್ದರಿಂದ ಅನ್ಯ ರಾಜ್ಯಗಳಿಂದ ಬಂದಿರುವ ಅನ್ಯ ಧರ್ಮಿಯರು ಮಧುಗಿರಿಯಲ್ಲಿ ಸೆಲೂನ್ ತೆರೆಯಲು ಅನುಮತಿ ನೀಡದಂತೆ ಸಂಬಂಧಪಟ್ಟವರಿಗೆ ಸೂಚಿಸುವಂತೆ ತಾಲೂಕು ಸವಿತಾ ಸಮುದಾಯದ ಮುಖಂಡರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪ್ರತಿನಿಧಿ ತ್ಯಾಗರಾಜು, ಮುಖಂಡರಾದ ತಲ್ಲಿ ಮಂಜಣ್ಣ, ರಘು, ಹರೀಶ್, ಎಚ್.ರಾಮಾಂಜಿನಪ್ಪ, ಮಾರುತಿ, ಪವನ್, ಬಾಬು, ಪ್ರಸನ್ನ, ಭಾಸ್ಕರ್ ಇತರರಿದ್ದರು.