

ಬೆಂಗಳೂರು: ವಾರ್ಷಿಕ ಆದಾಯ 32 ಸಾವಿರದಿಂದ 1.20 ಲಕ್ಷ ರೂ.ವರೆಗೆ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಪಿಂಚಣಿ ಮುಂದುವರಿಸುವಂತೆ ಕಂದಾಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ಸಚಿವರೂ ಆದ ಡಿಸಿಎಂ ಡಾ.ಜಿ. ಪರಮೇಶ್ವರ, ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರೂ. ಆದಾಯ ಮಿತಿ ಇತ್ತು. ಬಹಳ ದಿನಗಳಿಂದ ಇಷ್ಟೇ ಆದಾಯ ಮಿತಿಯಿದ್ದ ಕಾರಣ ಲಕ್ಷಾಂತರ ಜನರು ಪಿಂಚಣಿ ಸೌಲಭ್ಯದಿಂದ ಹೊರಗೆ ಉಳಿದಿದ್ದರು. ಇದೀಗ ಮಿತಿಯನ್ನು 1.20 ಲಕ್ಷ ರೂ.ಗೆ ಏರಿಕೆ ಮಾಡುವ ಮೂಲಕ ಬಹುಕಾಲದ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಹೇಳಿದರು.
ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಯನ್ನು ರಾಜ್ಯದಲ್ಲಿ ಪಿಂಚಣಿ ಫಲಾನುಭವಿಗಳ ಮಾಹಿತಿ ಜತೆಗೆ ಲಿಂಕ್ ಮಾಡಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಕಂಡುಬಂದಿದೆ. ಫಲಾನುಭವಿಗಳ ಭೌತಿಕ ಪರಿಶೀಲನೆಗಾಗಿ ಸಂಯೋಜನೆ ಮೊಬೈಲ್ ಆಪ್ ಸಿದ್ಧಪಡಿಸಲಾಗಿತ್ತು. ಪರಿಶೀಲನಾ ಸಮಯದಲ್ಲಿ ದಾಖಲಾತಿಗಳನ್ನು ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸ ಇಲ್ಲದಿದ್ದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದಿದ್ದ 18,06,032 ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಗ್ರಾಮ ಆಡಳಿತ ಅಧಿಕಾರಿಗಳು ಸಂಯೋಜನೆ ಮೊಬೈಲ್ ಆಪ್ ಮೂಲಕ ಪರಿಶೀಲಿಸಿದ ನಂತರ ಸಂಬಂಧಪಟ್ಟ ತಾಲೂಕು ತಹಸೀಲ್ದಾರರಿಂದ ನಿಯಮಾನು ಸಾರ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡಲು ನಿರ್ದೇಶನ ನೀಡಲಾಗಿದೆ. ಆದರೆ, 23,14,544 ಸಂದೇಹಾಸ್ಪದ ಫಲಾನುಭವಿಗಳ ಭೌತಿಕ ಪರಿಶೀಲನೆ ವೇಳೆ ಆದಾಯವು 32 ಸಾವಿರ ರೂ.ಗಿಂತ ಹೆಚ್ಚಿರುವುದು ಕಂಡುಬಂದಿರುತ್ತದೆ. ಇವರಲ್ಲಿ 32 ಸಾವಿರ ರೂ.ಗಿಂತ ಹೆಚ್ಚು ಹಾಗೂ 1.20 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವಂತಹ ಫಲಾನುಭವಿಗಳ ಪಿಂಚಣಿ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ 1.20 ಲಕ್ಷ ರೂ. ಒಳಗೆ ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸಲು ಕ್ರಮ ವಹಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶಗಳಿಗೆ 12 ಸಾವಿರ ರೂ. ಹಾಗೂ ನಗರ ಪ್ರದೇಶಗಳಿಗೆ 17 ಸಾವಿರ ರೂ. ನಿಗದಿಪಡಿಸಲಾಗಿತ್ತು. ಇದನ್ನು 2020ರಲ್ಲಿ 32 ಸಾವಿರ ರೂ.ಗೆ ಏರಿಕೆ ಮಾಡಲಾಗಿತ್ತು. ಇದೀಗ 1.20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.