ಪ್ರತಿಯೊಬ್ಬರೂ ನಿಗದಿತ ಅವಧಿಯೊಳಗೆ ಸಾಲ ಮರು ಪಾವತಿಸಿ, ಸಂಘದಿಂದ ಹೆಚ್ಚಿನ ಸಾಲ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ತಾಲೂಕಿನ ಪಿ.ಜಿ.ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಿಗೆ ಕೆಸಿಸಿ ಬೆಳೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದುವ ಮೂಲಕ ಆರ್ಥಿಕವಾಗಿ ಸಬರಾಗಿಸುವ ಉದ್ದೇಶದಿಂದ ಜಿಲ್ಲೆಯ ರೈತರಿಗೆ ಸಾಲ ಸೌಕರ್ಯ ಒದಗಿಸಲು ಹೆಚ್ಚು ಒತ್ತು ನೀಡಲಾಗಿದೆ. ಪಿ.ಜಿ. ಪಾಳ್ಯ ಸಂಘದ 36 ಸದಸ್ಯರಿಗೆ 30 ಲಕ್ಷ ರೂ. ಬೆಳೆ ಸಾಲ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು.
ಸಂಘದ ಆಡಳಿತ ಮಂಡಳಿ ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸುವುದರ ಮೂಲಕ ಸರ್ಕಾರದಿಂದ ಸಿಗುವ ಸವಲತ್ತು ರೈತರಿಗೆ ದೊರಕಿಸಿ ಕೊಡಬೇಕು. ಜತೆಗೆ ಸಂಘದ ಅಭಿವೃದ್ಧಿ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮಹೇಶ್, ಎಂಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಅನಿಲ್ ಹಾಗೂ ಇತರರಿದ್ದರು.