ಯಳಂದೂರಲ್ಲಿ ಸಂಭ್ರಮದ ಪಟ್ಟಲದಮ್ಮ ಹಬ್ಬ

ಯಳಂದೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ಪಟ್ಟಲದಮ್ಮ ದೇವಿಯನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
ಯಳಂದೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ಪಟ್ಟಲದಮ್ಮ ದೇವಿಯನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಪೌರ ಕಾರ್ಮಿಕರ ಕಾಲನಿಯ ಐತಿಹಾಸಿಕ ಪಟ್ಟಲದಮ್ಮ ದೇಗುಲ
  • ಪಟ್ಟಲದಮ್ಮ ಹಬ್ಬ
ಯಳಂದೂರು: ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪೌರ ಕಾರ್ಮಿಕರ ಕಾಲನಿಯ ಐತಿಹಾಸಿಕ ಪಟ್ಟಲದಮ್ಮ ದೇಗುಲದಲ್ಲಿ ಮಂಗಳವಾರ ಪಟ್ಟಲದಮ್ಮ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ದೇಗುಲದಲ್ಲಿ ವಿಶೇಷ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ದೇಗುಲವನ್ನು ಹಸಿರು ಚಪ್ಪರ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಇಡೀ ಕಾಲನಿ ಹಾಗೂ ಮುಖ್ಯ ರಸ್ತೆಯನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸೋಮವಾರ ಪಟ್ಟಣದ ಬಳೇಪೇಟೆಯಲ್ಲಿರುವ ಐತಿಹಾಸಿಕ ಬನ್ನಿಮಂಟಪದಿಂದ ದೇವರನ್ನು ವಿವಿಧ ಕಲಾತಂಡಗಳೊಂದಿಗೆ ಅಲಂಕೃತ ವಾಹನದಲ್ಲಿ ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಜಹಗೀರ‌್ದಾರ್ ಬಂಗಲೆ ಬಳಿ ಬಾಳೆದಿಂಡು ಕಡಿಯುವ ಸಂಪ್ರದಾಯವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಹಾಕಿಸಿಕೊಳ್ಳುವ ಮೂಲಕ ಭಕ್ತಿ ಮೆರೆದರು. ಕೆಲ ಮಹಿಳೆಯರು 6 ಅಡಿ ಉದ್ದದ ಸರಳುಗಳನ್ನು ಕೆನ್ನೆಗೆ ಚುಚ್ಚಿಸಿಕೊಂಡು ಅಚ್ಚರಿ ಮೂಡಿಸಿದರು. ಈ ಸಂದರ್ಭದಲ್ಲಿ ದೇವರ ಕುಣಿತ ಗಮನ ಸೆಳೆಯಿತು.
ಮಂಗಳವಾರ ಬೆಳಗ್ಗೆ ದೇವಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರತಿ ವರ್ಷವೂ ನಡೆಯುವ ಈ ಹಬ್ಬದಲ್ಲಿ ನೆರೆ ಜಿಲ್ಲೆ ಹಾಗೂ ತಮಿಳುನಾಡಿನಿಂದಲೂ ಭಕ್ತರು ಆಗಮಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net