ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷೃ ಆರೋಪ ರೋಗಿ ಸಾವು

ಸಿಂದಗಿ ನಗರದ ಸ್ಥಳೀಯ ಖಾಸಗಿ ಆಸ್ಪತ್ರೆ ಎದುರು ನೆರೆದಿದ್ದ ಕುಟುಂಬಸ್ಥರು ಹಾಗೂ ಸಾರ್ವಜನಿಕರು.
ಸಿಂದಗಿ ನಗರದ ಸ್ಥಳೀಯ ಖಾಸಗಿ ಆಸ್ಪತ್ರೆ ಎದುರು ನೆರೆದಿದ್ದ ಕುಟುಂಬಸ್ಥರು ಹಾಗೂ ಸಾರ್ವಜನಿಕರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾಂತೇಶ ಸುಳ್ಳೊಳ್ಳಿ ಮೃತ ವ್ಯಕ್ತಿ
  • ಆಸ್ಪತ್ರೆಯೊಳಗೆ ಶವವಿಟ್ಟು ಕೆಲಕಾಲ ಪ್ರತಿಭಟನೆ
ಸಿಂದಗಿ : ನಗರದ ಸ್ಥಳೀಯ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಮಂಗಳವಾರ ಆಸ್ಪತ್ರೆಯೊಳಗೆ ಶವವಿಟ್ಟು ಕೆಲಕಾಲ ಪ್ರತಿಭಟಿಸಿದ್ದಾರೆ.
ಮೃತ ರೋಗಿಯನ್ನು ತಾಲೂಕಿನ ಮಹಾಂತೇಶ ಸುಳ್ಳೊಳ್ಳಿ (40) ಎಂದು ಗುರುತಿಸಲಾಗಿದ್ದು, ಕಳೆದ ನಾಲ್ಕಾರು ದಿನಗಳ ಹಿಂದೆ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಸೋಮವಾರ ರಾತ್ರಿ ತೀವ್ರ ಹೊಟ್ಟೆ ನೋವು ಎಂದಾಗಲೂ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ್ದರು.
ಮಂಗಳವಾರ ಬೆಳಗ್ಗೆ ನಡೆದಾಡುತ್ತಲೇ ಇದ್ದ ಮಹಾಂತೇಶನಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಗ ಕುಟುಂಬಸ್ಥರು, ತುರ್ತು ಚಿಕಿತ್ಸೆ ನೀಡುವಂತೆ ವೈದ್ಯರನ್ನು ಕೇಳಿದಾಗ, ಅಲ್ಲಿನ ಮಹಿಳಾ ವೈದ್ಯೆ ಇಸಿಜಿ ಮಾಡಿಸಿ, ರೋಗಿಗೆ ಕಾರ್ಡಿಯಾಕ್ ಸಮಸ್ಯೆ ಕಂಡು ಬಂದಿದ್ದು, ಕೂಡಲೇ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ.
ನಂತರ ಕುಟುಂಬಸ್ಥರು ತುರ್ತು ವಾಹನ ವ್ಯವಸ್ಥೆ ಮೂಲಕ ವಿಜಯಪುರಕ್ಕೆ ತೆರಳುವ ದೇವರಹಿಪ್ಪರಗಿ ಬಳಿ ರೋಗಿ ಅಸುನೀಗಿದ್ದಾನೆ. ಸಾವಿನ ನೋವಿನಲ್ಲಿದ್ದ ಕುಟುಂಬಸ್ಥರು, ತುರ್ತು ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡದ ವೈದ್ಯರ ನಿರ್ಲಕ್ಷ್ಯದಿಂದಲೇ ಮಹಾಂತೇಶ ಅಸುನೀಗಿದ್ದಾನೆ ಎಂದು ಆರೋಪಿಸಿ, ಆಸ್ಪತ್ರೆಯೊಳಗೆ ಶವ ಹೊತ್ತೋಯ್ದು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net