ಸರಗೂರು: ಮತದಾನದ ಹಕ್ಕು ಕಾಪಾಡಿಕೊಳ್ಳಲು ಎಸ್‌ಐಆರ್‌ನಲ್ಲಿ ಭಾಗಿಯಾಗಲೇಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರೇಮ್ ಕುಮಾರ್ ಮನವಿ ಮಾಡಿದರು.
ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಎಸ್‌ಐಆರ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ 13 ಗ್ರಾಮ ಪಂಚಾಯಿತಿಗಳ ಗ್ರಾಮಗಳು ಮತ್ತು ಹಾಡಿಗಳಲ್ಲೂ ಎಸ್‌ಐಆರ್ ಕುರಿತು ಮನೆ ಮನೆ ಭೇಟಿ, ಸ್ವಚ್ಛತಾ ವಾಹನದ ಮೂಲಕ ನಾಗರಿಕರಿಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಜತೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಸಹಾಯಕರು, ಡಿಇಒಗಳು, ಕರ ವಸೂಲಿಕಾರರು ಹಾಗೂ ನೀರುಗಂಟಿಗಳನ್ನು ನಿಯೋಜಿಸಲಾಗಿದೆ ಎಂದರು.
ಮಾನವ ಸರಪಳಿ: ತಾಲೂಕಿನ ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರು, ವಿವಿಧ ಶಾಲಾ ಮಕ್ಕಳು ಹಾಗೂ ವಿಕಲಚೇತನರೊಡನೆ ತಾಲೂಕು ಪಂಚಾಯಿತಿ ಆವರಣದಿಂದ ನಗರದ ಬಸ್ ನಿಲ್ದಾಣದವರೆಗೂ ನಡೆದ ಜಾಥಾದಲ್ಲಿ ಎಸ್‌ಐಆರ್ ಕುರಿತ ವಿವಿಧ ಘೋಷವಾಕ್ಯ ಒಳಗೊಂಡ ಫಲಕಗಳನ್ನು ಪ್ರದರ್ಶಿಸುವ ಮೂಲಕ ಹಾಗೂ ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಅರಿವು ಮೂಡಿಸಲಾಯಿತು. ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳ ಮೂಲಕ ಸಾರ್ವಜನಿಕರಿಗೆ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ನರೇಗಾ ಸಂಯೋಜನಾಧಿಕಾರಿ ಮಹದೇವಸ್ವಾಮಿ, ಮುಖ್ಯಾಧಿಕಾರಿ ಸಂತೋಷ್‌ಕುಮಾರ್, ಎನ್‌ಆರ್‌ಎಲ್‌ಎಂ ಟಿಪಿಎಂ ಶ್ರೀಕಾಂತ್, ಐಇಸಿ ಸಂಯೋಜಕ ರವಿ, ಅಧಿಕಾರಿಗಳಾದ ದೇವರಾಜ್, ಬಸವರಾಜು ಇತರರು ಇದ್ದರು.