ಪಾರ್ಕಿನ್ಸನ್​​ ಆರಂಭಿಕ ಪತ್ತೆಗೆ ಬಂತು 5 ರೂ. ಸಾಧನ! ಇ-ಪತ್ರಮ್ ಸಂಶೋಧಿಸಿದ ಕನ್ನಡತಿ; ಡೋಪಮೈನ್ ಪರೀಕ್ಷೆ ಯಶೋಗಾಥೆ

ಇ-ಪತ್ರಮ್ ಸಂಶೋಧಿಸಿದ ಕನ್ನಡತಿ
ಇ-ಪತ್ರಮ್ ಸಂಶೋಧಿಸಿದ ಕನ್ನಡತಿ
Published on

| ಗೋಪಾಲಕೃಷ್ಣ ಪಾದೂರು, ಉಡುಪಿ

ಪಾರ್ಕಿನ್ಸನ್, ಅಲ್ಜೈಮರ್​ನಂತಹ ಆರೋಗ್ಯ ಸಮಸ್ಯೆಯ ಆರಂಭಿಕ ಹಂತ ಅರಿಯಲು ಬಳಸುವ ಕ್ಯಾಟೆಕೋಲಮೈನ್ ಪರೀಕ್ಷೆ, ಎಂಆರ್​ಐ ಹಾಗೂ ಪಿಇಟಿ ಸ್ಕಾ್ಯನ್ ಪರೀಕ್ಷೆ ಬಲು ದುಬಾರಿ. ಇದನ್ನು ಬಡವರ ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ತೀರ್ಥಹಳ್ಳಿ ಮೂಲದ ಸಂಶೋಧಕಿ ಕೃತಿ ಕೆ.ರಾವ್ ಸಂಶೋಧಿಸಿರುವ ಇ-ಪತ್ರಮ್ ಎಂಬ ಕಾಗದ ಆಧಾರಿತ ಸಾಧನ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ.

ಪಂಜಾಬ್​ನ ಮೊಹಾಲಿಯಲ್ಲಿರುವ ಇನ್​ಸ್ಟಿಟ್ಯೂಟ್ ಆಫ್ ನ್ಯಾನೋ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಕೃತಿ ಅವರು ಡಾ.ಭಾನುಪ್ರಕಾಶ್ ಮಾರ್ಗದರ್ಶನದಲ್ಲಿ ಮೂತ್ರದಲ್ಲಿ ಡೋಪಮೈನ್ ಮಟ್ಟ ಅಳೆಯುವ ಇ-ಪತ್ರಮ್ ಎಂಬ ಕಾಗದ ಆಧಾರಿತ ಜನಸ್ನೇಹಿ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಪ್ರಸ್ತುತ ಮಿದುಳಿನ ಆರೋಗ್ಯ ತಿಳಿಯುವ ಕ್ಯಾಟೆಕೋಲಮೈನ್ ಪರೀಕ್ಷೆಗೆ 5 ಸಾವಿರ ರೂ. ಖರ್ಚು ತಗುಲುತ್ತಿದ್ದು, ಇ-ಪತ್ರಮ್ ಸೆನ್ಸರ್ ಪರೀಕ್ಷೆೆಗೆ ತಗುಲುವುದು 5ರಿಂದ 10 ರೂ. ಅಷ್ಟೇ. ಇಪ್ಪತ್ತು ನಿಮಿಷದಲ್ಲಿ ವರದಿ ಪಡೆಯಬಹುದು. ಈ ಸಾಧನ ಆರೋಗ್ಯ ಸೇವೆಗಳಲ್ಲಿ ವೆಚ್ಚ ಕಡಿತಕ್ಕೆ ಮಹತ್ವದ ದಾರಿ ಕಲ್ಪಿಸಿದೆ.

ಯುವ ಸಂಶೋಧಕಿ ಪ್ರಶಸ್ತಿ

ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್ಸಿ ಹಾಗೂ ಶಿವಮೊಗ್ಗ ಕುವೆಂಪು ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದಿರುವ ಕೃತಿ, ಪ್ರಸ್ತುತ ಸಂಶೋಧನಾ ವಿದ್ಯಾರ್ಥಿನಿ. ಇತ್ತೀಚೆಗೆ ಜೋಧ್​ಪುರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಹೆಲ್ತ್ ಸೈನ್ಸ್ ಓರಲ್ ಪ್ರೆಸೆಂಟೇಶನ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ, ಒಂದು ಲಕ್ಷ ರೂ.ನಗದು ಬಹುಮಾನದೊಂದಿಗೆ ಯುವ ಸಂಶೋಧಕಿ ಪ್ರಶಸ್ತಿ ಪಡೆದಿದ್ದಾರೆ. ದೇಶದ ಪ್ರತಿಷ್ಠಿತ ವಿಜ್ಞಾನಿಗಳ ನಡುವೆ ಕೃತಿ ಅವರ ಸಂಶೋಧನೆಗೂ ಮಾನ್ಯತೆ ಲಭಿಸಿದೆ.

ಮೊದಲ ಜನಸ್ನೇಹಿ ಸಾಧನ

ಮೊದಲ ಬಾರಿಗೆ ಜನಸ್ನೇಹಿ ಡಿವೈಸ್ ಪರಿಚಯಿಸಲಾಗಿದೆ. ಗ್ಲೂಕೋಸ್ ಮೀಟರ್ ರಕ್ತದಲ್ಲಿ ಸಕ್ಕರೆ ಮಟ್ಟ ಅಳೆಯುವಂತೆ ಇಪತ್ರಮ್ ಸಾಧನದಿಂದ ಮೂತ್ರದ ಕೆಲವು ಹನಿಗಳಲ್ಲಿ ಡೋಪಮೈನ್ ಮಟ್ಟ ಅಳೆಯಬಹುದು. ಈ ಮೂಲಕ ನರವೈಜ್ಞಾನಿಕ ಆರೋಗ್ಯ ಮೇಲ್ವಿಚಾರಣೆ ಮನೆಯಿಂದಲೇ ಸಾಧ್ಯ. ಕೃತಿ ಅವರು 1 ವರ್ಷದಿಂದ ಈ ಸಂಶೋಧನೆಯಲ್ಲಿ ತೊಡಗಿದ್ದು, ಅಮೆರಿಕನ್ ಕೆಮಿಕಲ್ ಸೊಸೈಟಿ ಸೆನ್ಸರ್ಸ್​ನಲ್ಲಿ ಪ್ರಬಂಧವನ್ನೂ ಪ್ರಕಟಿಸಿದ್ದಾರೆ.

"

ಪಾರ್ಕಿನ್ಸ​ನ್​​ನಂತಹ ರೋಗಗಳ ಆರಂಭಿಕ ಲಕ್ಷಣ ಪತ್ತೆ ಮಾಡುವಲ್ಲಿ ಇ-ಪತ್ರಮ್ ಸಾಧನ ಮಹತ್ವದ ಮೈಲಿಗಲ್ಲು. ಆರೋಗ್ಯ ಪರೀಕ್ಷಾ ನಿಯಮ ಪ್ರಕಾರವೇ ಮೂತ್ರ ಪರೀಕ್ಷೆ ನಡೆಸಲಾಗಿದೆ. ಇಬ್ಬರಿಂದ ಮಾದರಿ ಸಂಗ್ರಹಿಸಿ ಈ ಡಿವೈಸ್ ಮೂಲಕ ಡೋಪಮೈನ್ ಸಂಖ್ಯೆ ಅಳೆಯಲಾಗಿದೆ. ಇದೇ ಸಮಯದಲ್ಲಿ ಮೂತ್ರ ಮಾದರಿಯನ್ನು ಕ್ಯಾಟೆಕೋಲಮೈನ್ ಪರೀಕ್ಷೆಗೂ ಒಳಪಡಿಸಲಾಗಿತ್ತು. ಫಲಿತಾಂಶ ಒಂದೇ ಬಂದಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೇ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಇಚ್ಛೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net