ಬಂಗಾರಪೇಟೆ: ಉತ್ತಮ ಸಮಾಜ ನಿಮಾರ್ಣವಾಗಬೇಕಾದರೆ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಅಪ್ಪಯ್ಯಗೌಡ ಸಲಹೆ ನೀಡಿದರು.
ಕಾರಹಳ್ಳಿಯ ಕಲ್ಯಾಣ ಮಂಟಪದಲ್ಲಿ ಕಾರಹಳ್ಳಿ, ಮಾವಹಳ್ಳಿ, ಹುದುಕುಳ ಕ್ಲಸ್ಟರ್ನ ಸರ್ಕಾರಿ ಶಾಲೆಗಳ ಸುಮಾರು 500 ವಿದ್ಯಾರ್ಥಿಗಳಿಗೆ ಮಾರವಾಡಿ ಯುವಾ ಮಂಚ್ನಿಂದ ಬ್ಯಾಗ್, ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಜತೆಗೆ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯ, ಪಠ್ಯೇತರ ಚಟುವಟಿಕೆಗಳಿಗೆ ಬೇಕಾದ ಕಲಿಕಾ ಉಪಕರಣಗಳ ಲಭ್ಯತೆ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ದಾನಿಗಳ ಸಹಕಾರ ಮಹತ್ವದ್ದಾಗಿದೆ ಎಂದರು.
ಸಮಾಜದಲ್ಲಿ ಆರ್ಥಿಕವಾಗಿ ಸದೃಢವಾದ ವ್ಯಕ್ತಿಗಳು ಅನಗತ್ಯ ಖರ್ಚುಗಳಿಗೆ ಹಣ ವ್ಯಯ ಮಾಡದೇ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವು ನೀಡಿದರೆ ಸಮಾಜದ ಅಭಿವೃದ್ಧಿಗೆ ಕೊಡುಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ನಿರ್ದೇಶಕ ಅಪ್ಪಯ್ಯಗೌಡ, ಮಾರವಾಡಿ ಯುವಾ ಮಂಚ್ನ ಪದಾಧಿಕಾರಿಗಳು, ವಿವಿಧ ಸರ್ಕಾರಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.