ವಾಹನ ಮಾರಾಟ ಮಾಡಿದ ಮೇಲೆ ಮಾಲೀಕನಿಗೆ ವಿಮೆ ಹಕ್ಕಿಲ್ಲ| Consumer court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಆರ್​ಸಿ ಬದಲಾಗದಿದ್ದರೂ ಪರಿಹಾರ ಕೋರಲಾಗದು
  • ರಾಜ್ಯ ಗ್ರಾಹಕರ ವ್ಯಾಜ್ಯಗಳ ಆಯೋಗದ ಸ್ಪಷ್ಟನೆ

ಬೆಂಗಳೂರು: 

ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ತಕ್ಷಣವೇ ಮಾಲೀಕರು ಅದರ ಮೇಲಿನ "ವಿಮಾ ಹಿತಾಸಕ್ತಿ'ಯನ್ನು ಕಳೆದುಕೊಳ್ಳುತ್ತಾರೆ. ನೋಂದಣಿ ಪತ್ರ (ಆರ್​ಸಿ) ಮತ್ತು ವಿಮಾ ಪಾಲಿಸಿಯ ಕಾಗದಪತ್ರಗಳಲ್ಲಿ ಹೆಸರು ಬದಲಾಗದೇ ಇದ್ದರೂ ಸಹ, ಅಪಘಾತ ಸಂಭವಿಸಿದಾಗ ಮೂಲ ಮಾಲೀಕರು ವಿಮಾ ಪರಿಹಾರ ಕೋರಲು ಸಾಧ್ಯವಿಲ್ಲ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಆಯೋಗ ಸ್ಪಷ್ಟಪಡಿಸಿದೆ.

ವಿಮಾ ಪರಿಹಾರ ನಿರಾಕರಿಸಿದ್ದ ಮಂಗಳೂರು ಜಿಲ್ಲಾ ಗ್ರಾಹಕರ ಆಯೋಗದ ಆದೇಶ ಪ್ರಶ್ನಿಸಿ ಕಾಸರಗೋಡು ಮೂಲದ ಪವಿತ್ರಾ ಕೇಶವ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ರಾಜ್ಯ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್​ ಮತ್ತು ಮಹಿಳಾ ಸದಸ್ಯೆ ಸುನಿತಾ ಚನ್ನಬಸಪ್ಪ ಬಾಗೇವಾಡಿ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅರ್ಜಿದಾರ ಹೆಸರಿನಲ್ಲಿದ್ದ ಕಾರು 2012ರ ಅ.5ರಂದು ಅಪಘಾತಕ್ಕೀಡಾಗಿತ್ತು. ಅದರ ರಿಪೇರಿಗಾಗಿ 1.15 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಆ ಮೊತ್ತವನ್ನು ಭರಿಸಿಕೊಂಡುವಂತೆ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಪಘಾತಕ್ಕೂ ಮುನ್ನವೇ ಆ ವಾಹನವನ್ನು ಕಿರಣ್​ ಕುಮಾರ್​ ಎಂಬುವರಿಗೆ ಮಾರಾಟ ಮಾಡಲಾಗಿತ್ತು. ವಾಹನವನ್ನು ಪವಿತ್ರಾ ಅವರಿಂದ ನಾನು ಖರೀದಿಸಿದ್ದೆ. ಅದು ನನ್ನ ವಶದಲ್ಲೇ ಇತ್ತು. ಆದರೆ, ಕಾಗದಪತ್ರಗಳು ವರ್ಗಾವಣೆಯಾಗಿರಲಿಲ್ಲ ಎಂದು ಕಂಪನಿಯ ವಿಚಾರಣೆ ವೇಳೆ ಕಿರಣ್​ ಕುಮಾರ್​ ಒಪ್ಪಿಕೊಂಡಿದ್ದರು. ಈ ಆಧಾರದಲ್ಲಿ ವಿಮಾ ಪರಿಹಾರ ಅರ್ಜಿಯನ್ನು ಕಂಪನಿಯು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸಲ್ಲಿಸಿದ್ದ ಅರ್ಜಿ ಕೂಡ ತಿರಸತವಾಗಿತ್ತು.

ಮಾಲೀಕರ ವಾದ ತಿರಸ್ಕೃತ:

ವಾಹನವನ್ನು ಮಾರಾಟ ಮಾಡಿ ಮತ್ತೊಬ್ಬರ ವಶಕ್ಕೆ ನೀಡಿದ ತಕ್ಷಣವೇ ಮೂಲ ಮಾಲೀಕರ ವಿಮೆ ಹಕ್ಕು ಕೊನೆಗೊಳ್ಳುತ್ತದೆ. ಆರ್​ಸಿ ಬದಲಾಯಿಸದಿರುವುದಕ್ಕೆ ಸೂಕ್ತ ಕಾರಣಗಳನ್ನು ನೀಡಲು ಅರ್ಜಿದಾರರು ವಿಫಲರಾಗಿದ್ದಾರೆ. ಆದ್ದರಿಂದ ಜಿಲ್ಲಾ ಆಯೋಗದ ಆದೇಶ ಕಾನೂನುಬದ್ಧವಾಗಿದೆ ಎಂದಿರುವ ರಾಜ್ಯ ಆಯೋಗ ಅರ್ಜಿ ವಜಾಗೊಳಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net