ಆಲಮೇಲ ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಗ್ರಾಪಂ ಸಿಬ್ಬಂದಿ ಭೀಮು ಮುಂಗೋಣಿಗೆ ಮನವಿ ಸಲ್ಲಿಸಿದರು. ಶಿವಾನಂದ ಸಾಲಕ್ಕಿ, ಆನಂದ ಅರಳಗುಂಡಗಿ, ವಿಷ್ಣು ಮೂಲಿಮನಿ, ಕಾಶೀನಾಥ ಹೂಗಾರ, ಯಲ್ಲಪ್ಪ ಶಿರಶ್ಯಾಡ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಆಲಮೇಲ: ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದ್ದು, ಗ್ರಾಮಸ್ಥರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ರಾಮನಹಳ್ಳಿ ಗ್ರಾಮ ಪಂಚಾಯಿತಿಗೆ ಮಹಿಳೆಯರೊಂದಿಗೆ ಬುಧವಾರ ಗ್ರಾಮಸ್ಥರು ಮುತ್ತಿಗೆ ಹಾಕಿ ತಕ್ಷಣವೇ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಗ್ರಾಪಂ ಸಿಬ್ಬಂದಿ ಭೀಮು ಮುಂಗೋಣಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿಗಾಗಿ ಕಿಲೋ ಮೀಟರ್ ಗಟ್ಟಲೆ ದೂರ ಅಲೆಯಬೇಕಾದ ಸ್ಥಿತಿ ಬಂದೊದಗಿದೆ ಎಂದು ಮಹಿಳೆಯರು ಅಳಲನ್ನು ತೋಡಿಕೊಂಡರು. ಗ್ರಾಮಕ್ಕೆ ತಕ್ಷಣವೇ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಬೇಕು, ಕೆಟ್ಟು ಹೋಗಿರುವ ಬೋರ್‌ವೆಲ್ ಹಾಗೂ ಪೈಪ್ ಲೈನ್‌ಗಳನ್ನು ಯುದ್ಧೋಪಾದಿಯಲ್ಲಿ ದುರಸ್ತಿ ಮಾಡಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮದ ಶಿವಾನಂದ ಸಾಲಕ್ಕಿ, ಆನಂದ ಅರಳಗುಂಡಗಿ, ವಿಷ್ಣು ಮೂಲಿಮನಿ, ಕಾಶೀನಾಥ ಹೂಗಾರ, ಯಲ್ಲಪ್ಪ ಶಿರಶ್ಯಾಡ, ರೇವಣ್ಣಪ್ಪ ರಾಂಪೂರ, ದಾದು ಮುಲ್ಲಾ, ಮಹಿಳೆಯರು ಇತರರಿದ್ದರು.