_1777656869668.webp?w=480&auto=format%2Ccompress&fit=max)
_1777656869668.webp?w=480&auto=format%2Ccompress&fit=max)
ಶಿಕಾರಿಪುರದಲ್ಲಿ ಅಮ್ಮನ ಮನೆಯ ಶ್ರೀಮಂತಿಕೆ ಮನೆಮಾತಾಗಿತ್ತು. ವೀರಭದ್ರ ಶಾಸ್ತ್ರಿಯವರೆಂದರೆ ಶ್ರೀಮಂತಿಕೆಗೆ ಹೆಸರುವಾಸಿ ಎಂಬಂತಿತ್ತು. ಅಮ್ಮ ಯಾವಾಗಲೂ ಒಂದು ಕಥೆ ಹೇಳುತ್ತಿದ್ದಳು. ನನ್ನ ಅಕ್ಕ ಪದ್ಮಾ ಸಣ್ಣ ಮಗುವಿದ್ದಾಗ ಅವಳ ಮೈಮೇಲೆ ತುಂಬಾ ಚಿನ್ನ ಹಾಕಿದ್ದರಂತೆ, ಮನೆಗೆ ಬರುತ್ತಿದ್ದ ಕೆಲಸದವರು, ಪರಿಚಯಸ್ಥರು, ಮಗುವನ್ನು ಎತ್ತಿಕೊಳ್ಳುವುದಕ್ಕೂ ಹೆದರುವಷ್ಟು ಮಗುವಿನ ಮೇಲೆ ಒಡವೆಗಳನ್ನು ಹಾಕುತ್ತಿದ್ದರಂತೆ. ಈ ಮಗು ಆಟವಾಡುತ್ತಾ ಕೊಳದ ಬಳಿ ಕುಳಿತು ಕೈಬೆರಳಿನಲ್ಲಿದ್ದ ಉಂಗುರಗಳನ್ನು ಒಂದೊಂದೇ ತೆಗೆದು ಕೊಳಕ್ಕೆ ಎಸೆಯುತ್ತಿದ್ದಳಂತೆ, ಅಷ್ಟೊಂದು ಶ್ರೀಮಂತ ತವರು ಅಮ್ಮನದಾಗಿತ್ತು. ಅಷ್ಟು ಶ್ರೀಮಂತಿಕೆಯನ್ನು ಉಂಡು ಬೆಳೆದ ಅಮ್ಮ ಅಪ್ಪಾಜಿಯ ಕೈಹಿಡಿದ ನಂತರ ಎದುರಾದ ಪರಿಸ್ಥಿತಿಗಳಿಗೆ ಸ್ಪಂದಿಸಿದ ಕ್ರಮ ನಮಗೆಲ್ಲ ಆದರ್ಶ.
ನಾವು ಐದು ಜನ ಮಕ್ಕಳು. ರಾಜಕೀಯ ಬದುಕನ್ನು ಅಪ್ಪಾಜಿ ಬಹಳ ಗಂಭೀರವಾಗಿ ತೆಗೆದುಕೊಂಡು ಆರ್ಥಿಕ ತೊಂದರೆ ಎದುರಿಸಿದ ಸಂದರ್ಭದಲ್ಲಿ ಅಪ್ಪಾಜಿಗೆ ಹೆಗಲಾದವರು ಅಮ್ಮ. ಆಗ ಅಮ್ಮನ ಒಡವೆಗಳನ್ನೆಲ್ಲಾ ಅಪ್ಪಾಜಿ ಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಹೋಗಿ ಮಾರಾಟ ಮಾಡಿ ಸಂಪೂರ್ಣವಾಗಿ ಆ ಹಣವನ್ನು ರಾಜಕೀಯಕ್ಕೆ ಬಳಸಿಕೊಂಡ ಕತೆಯನ್ನು ಅಪ್ಪಾಜಿಯೇ ಹೇಳುತ್ತಾರೆ. ತವರಿನ ಉಡುಗೊರೆಗಳ ಮೇಲೆ ಹೆಣ್ಣಿಗೆ ಸ್ವಲ್ಪ ಹೆಚ್ಚಿಗೆಯೇ ಪ್ರೀತಿಯಿರುತ್ತದೆ. ಆದರೆ ಆ ಉಡುಗೊರೆಗಳನ್ನೇ ಅಮ್ಮ ಅಪ್ಪಾಜಿಗೆ ಮಾರಾಟಕ್ಕಾಗಿ ಕೊಟ್ಟುಬಿಡುತ್ತಾಳೆ. ಅಪ್ಪಾಜಿಯ ಕನಸುಗಳು ಅಮ್ಮನಿಗೆ ಅಷ್ಟು ಮುಖ್ಯವಾಗಿದ್ದವು. ಇಂಥ ವಿಷಯಗಳಿಗಾಗಿ ಅಮ್ಮನಿಗೆ ಬೇಸರವಿರಲಿಲ್ಲ. ಅಪ್ಪನ ಏಳ್ಗೆ ಮಾತ್ರ ಅವರ ಕಣ್ಣ ಮುಂದಿತ್ತು. ಅದಾದ ನಂತರ ಕೇವಲ ಒಂದು ಉದ್ದದ ಮಾಂಗಲ್ಯ ಸರ ಮತ್ತು ಕೈಗೆ ಒಂದೊಂದು ಬಳೆ ಬಿಟ್ಟರೆ ಬೇರೆ ಆಭರಣಗಳನ್ನು ಧರಿಸುತ್ತಿರಲಿಲ್ಲ. ಉದ್ದ ಕೂದಲಿನ ಅಮ್ಮ ಒಳ್ಳೆಯ ಸೀರೆ ಉಟ್ಟು ಓಡಾಡುತ್ತಿದ್ದರೆ ನಿರಾಭರಣ ಸುಂದರಿಯ ಹಾಗೆ ಕಾಣಿಸುತ್ತಿದ್ದರು. ಅವರ ಮುಖದ ನಗುವೇ ಅವರಿಗೆ ಆಭರಣವಾಗಿತ್ತು.
ಅಪ್ಪಾಜಿಗೆ ಈಗ 85 ವರುಷ ತುಂಬಿದೆ. ಅಮ್ಮನನ್ನು ಅವರು ಬಹಳವಾಗಿ ನೆನಪಿಸಿಕೊಳ್ಳುತ್ತಿರುವ ಹಾಗೆ ನನಗೆ ಭಾಸವಾಗುತ್ತಿದೆ. ಒಂಟಿತನದ ಭಾವ ಅವರನ್ನು ಕಾಡುತ್ತಿದೆ ಎಂದು ಅನ್ನಿಸುತ್ತದೆ. ಅವರು ಯಾವುದನ್ನೂ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹಾಗಾಗಿ ಅವರ ಮನಸ್ಸು ಕೆಲವೊಮ್ಮೆ ನನಗೂ ಅರ್ಥವಾಗುವುದಿಲ್ಲ. ಆದರೆ ಅಪ್ಪಾಜಿಗೆ ಅಮ್ಮನ ಪ್ರೀತಿ ನೆನಪಾಗಲೇಬೇಕು, ಕಾರಣ ಅಮ್ಮನ ತ್ಯಾಗಕ್ಕೆ ಹಲವು ಮುಖಗಳಿವೆ. ಅವುಗಳಲ್ಲಿ ಈ ಕತೆಯೂ ಒಂದು. ವಿಜಯೇಂದ್ರ ಎರಡು ವರ್ಷದ ಮಗುವಿದ್ದಿರಬಹುದು. ಅಡುಗೆಯವರು ಬಾರದ ಕಾರಣಕ್ಕೆ ಅಮ್ಮ ಅಡುಗೆ ಮನೆಯಲ್ಲಿ ಅನ್ನ ಬಸಿಯುತ್ತಿದ್ದರು. ತುಂಟನಾಗಿದ್ದ ವಿಜಯೇಂದ್ರ ತಟ್ಟೆಯೊಂದನ್ನು ಬಸಿಯುತ್ತಿದ್ದ ಅನ್ನಕ್ಕೆ ಅಡ್ಡವಾಗಿ ಹಿಡಿದುಬಿಟ್ಟ. ಪರಿಣಾಮವಾಗಿ ಅವನ ಕೈ-ಕಾಲುಗಳಿಗೆ ಬಿಸಿ ಗಂಜಿ ತಾಗಿ ಬೊಬ್ಬೆಗಳಾದವು. ನೋಡಿದರೇ ಭಯವಾಗುವಂತೆ ಇತ್ತದು. ಅಪ್ಪಾಜಿ ರಾಜಕೀಯದಲ್ಲಿ ಮುಳುಗಿಹೋಗಿದ್ದರು. ಮನೆಯಲ್ಲಿ ಇರಲಿಲ್ಲ. ಅಮ್ಮನೇ ವೈದ್ಯರ ಬಳಿ ಕರೆದೊಯ್ದಳು. ಅಪ್ಪಾಜಿಗೆ ತಿಳಿದರೆ ಎಲ್ಲಿ ಆತಂಕ ಪಡುತ್ತಾರೋ ಎಂದು ಇಡೀ ಸಂದರ್ಭವನ್ನು ಅಮ್ಮ ಒಬ್ಬರೇ ನಿಭಾಯಿಸಿದರು. ಅಪ್ಪಾಜಿ ಮನೆಗೆ ಬಂದಾಗ ವಿಜಯೇಂದ್ರನಿಗೆ ಉದ್ದ ಕಾಲಿನ ಪ್ಯಾಂಟ್ ಹಾಕಿ ಅಪ್ಪಾಜಿಗೆ ಗೊತ್ತಾಗದಂತೆ ನೋಡಿಕೊಂಡಿದ್ದರು. ಐದೂ ಮಕ್ಕಳನ್ನು ದೊಡ್ಡವರನ್ನಾಗಿ ಮಾಡುವಾಗ ಅಪ್ಪಾಜಿಯವರ ರಾಜಕೀಯ ದಾರಿಗೆ ಯಾವುದೇ ತೊಡಕಾಗದಂತೆ ನೋಡಿಕೊಂಡವರು ಅಮ್ಮ. ಅವರ ಇಂಥ ಪ್ರೀತಿ ಅಪ್ಪನಿಗೆ ಈ ಇಳಿವಯಸ್ಸಿನಲ್ಲಿ ನೆನಪಾಗದೇ ಇರಲಾರದು.
ದಾಂಪತ್ಯ ಎನ್ನುವುದನ್ನು ನಾನು ಅಪ್ಪಾಜಿ-ಅಮ್ಮನನ್ನು ನೋಡಿ ಕಲಿತಿದ್ದೇನೆ. ಅಪ್ಪಾಜಿ ಬಾಯಿಯಲ್ಲಿ ಅಮ್ಮನ ಹೆಸರು ಕೇಳುವುದಕ್ಕೇ ಚಂದ. ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೇ ಕೆಲಸದ ಒತ್ತಡದಲ್ಲಿ ಇದ್ದರೂ ಅಪ್ಪಾಜಿ ಶಿವರಾತ್ರಿಯ ದಿನ ತಪ್ಪದೇ ಮನೆಗೆ ಬರುತ್ತಿದ್ದರು. ಅವರಿಬ್ಬರೂ ಜತೆಯಲ್ಲಿ ಕುಳಿತು ಪೂಜೆ ಮಾಡುತ್ತಿದ್ದಾಗ ನಾವು ಕಣ್ತುಂಬಿಕೊಳ್ಳುತ್ತಿದ್ದೆವು. ನಮ್ಮೆಲ್ಲರ ವಿದ್ಯಾಭ್ಯಾಸದ ಬಗ್ಗೆ ಅಪ್ಪಾಜಿಯವರ ಕನಸು ದೊಡ್ಡದಿತ್ತು. ನಾನು ಶಿಕಾರಿಪುರದಲ್ಲಿ ಓದುತ್ತಿದ್ದೆ. ಅಪ್ಪಾಜಿ ಯಾವಾಗಲೂ ಹೇಳುತ್ತಿದ್ದರು, ‘ಪ್ರಪಂಚ ನೋಡಬೇಕೆಂದರೆ ನೀವು ಬೆಂಗಳೂರಿನಲ್ಲಿ ಓದಬೇಕು’ ಎಂದು. ಅವರ ದೂರದೃಷ್ಟಿ ದೊಡ್ಡದಿತ್ತು.
ಅವರೊಮ್ಮೆ ಬೆಂಗಳೂರಿನಿಂದ ಶಿಕಾರಿಪುರದ ಮನೆಗೆ ಬಂದಾಗ ನಾನು ಬೆಳಗ್ಗೆ ಬೇಗನೆ ಎದ್ದು ಓದುತ್ತಾ ಕುಳಿತಿದ್ದೆ. ಅಪ್ಪಾಜಿ ‘ಇಷ್ಟೊಂದು ಆಯಾಸ ಮಾಡಿಕೊಂಡು ಓದುವ ಅವಶ್ಯಕತೆ ಏನಿದೆ’ ಎಂದರು. ನಾನು ‘ಮೆಡಿಕಲ್ ಓದಬೇಕು’ ಎಂದೆ. ಅಪ್ಪಾಜಿ ‘ನಿಮ್ಮನ್ನೆಲ್ಲ ಒಳ್ಳೆಯ ಮನೆಗೆ ಸೇರಿಸುತ್ತೇನೆ, ಇಷ್ಟು ಕಷ್ಟ ಪಡಬೇಕಾಗಿಲ್ಲ’ ಎಂದರು. ನಾನು ಮೆಡಿಕಲ್ ಓದುವ ವಿಚಾರವನ್ನು ಬಿಟ್ಟು ಬೆಂಗಳೂರಿನಲ್ಲಿ ಹೋಂ ಸೈನ್ಸ್ ನಲ್ಲಿ ಬಿಎಸ್ಸಿ ಸೇರಿಕೊಂಡೆ. ಅದಾಗಿ ಮೂರ್ನಾಲ್ಕು ತಿಂಗಳುಗಳಿಗೆ ಅಪ್ಪಾಜಿ ಸುತ್ತೂರು ಸ್ವಾಮೀಜಿ ಬಳಿ ಬೇರೆಯವರ ಮೆಡಿಕಲ್ ಸೀಟ್ ಕೇಳಿದರಂತೆ, ಆಗ ಸ್ವಾಮೀಜಿ ‘ಸದಾ ಬೇರೆಯವರಿಗೆ ಸೀಟ್ ಕೇಳುತ್ತೀರಿ, ನಿಮ್ಮ ಮಕ್ಕಳಿಗೆ ಬೇಕಿಲ್ಲವೇ?’ ಎಂದರಂತೆ. ಅಪ್ಪಾಜಿ ನೇರವಾಗಿ ಬೆಂಗಳೂರಿಗೆ ಬಂದು ಹಾಸ್ಟೆಲ್ನಲ್ಲಿದ್ದ ನನ್ನನ್ನು ಭೇಟಿಯಾಗಿ ಮೆಡಿಕಲ್ ಓದುವಂತೆ ಹೇಳಿದರು. ನಾನು ನನ್ನ ಒಂದು ವರುಷದ ಅವಧಿಯನ್ನು ಹಾಳು ಮಾಡಬಾರದೆಂದು ಮೆಡಿಕಲ್ ಓದುವುದನ್ನು ನಿರಾಕರಿಸಿದೆ.
ಹೆಣ್ಣುಮಕ್ಕಳ ಭದ್ರತೆ ಬಗ್ಗೆ ಅಪ್ಪಾಜಿ ತುಂಬಾ ಎಚ್ಚರವಹಿಸುತ್ತಿದ್ದರು. ನಾವು ಗೆಳತಿಯರ ಮನೆಗೆ ಹೋದರೂ ಆತಂಕಪಡುತ್ತಿದ್ದರು. ‘ನಿಮ್ಮ ಗೆಳತಿ ಒಳ್ಳೆಯವಳಿರಬಹುದು, ಆದರೆ ಆ ಮನೆಯಲ್ಲಿ ಇರುವ ಎಲ್ಲರೂ ಒಳ್ಳೆಯವರೇ ಆಗಬೇಕೆಂದಿಲ್ಲ’ ಎಂದು ಎಚ್ಚರಿಸುತ್ತಿದ್ದರು. ಎಷ್ಟೋ ಬಾರಿ ನಮ್ಮ ಹಾಸ್ಟೆಲ್ಗಳಿಗೆ ದಿಢೀರ್ ಭೇಟಿ ನೀಡುತ್ತಿದ್ದರು. ಅಮ್ಮ ಇದ್ದಾಗಲೂ ಅಪ್ಪಾಜಿ ಮಕ್ಕಳ ಮೇಲೆ ಅಪಾರ ಕಾಳಜಿ ಹೊಂದಿದ್ದರು. ಅಮ್ಮ ಹೋದ ಮೇಲಂತೂ ತಾಯಿಯ ಮಮತೆ ಹಾಗೂ ತಂದೆಯ ಭದ್ರತೆ ಎರಡನ್ನೂ ಸಮರ್ಥವಾಗಿ ಒದಗಿಸಿದವರು ಅಪ್ಪಾಜಿ.
ಐದೂ ಮಕ್ಕಳನ್ನೂ ತಾರತಮ್ಯಕ್ಕೆ ಅವಕಾಶವಾಗದಂತೆ ಪ್ರೀತಿಸುತ್ತಿದ್ದರು. ಐವರ ಸಾಮರ್ಥ್ಯವನ್ನೂ ಗುರುತಿಸುತ್ತಿದ್ದರು. ಅದರಲ್ಲೂ ನಮ್ಮ ಸಹೋದರಿ ಉಮಾ ಪ್ರಾಥಮಿಕ ಹಂತದಿಂದಲೂ ಪರೀಕ್ಷೆಗಳಲ್ಲಿ ಟಾಪರ್. ಕಿರಿಯ ಪ್ರಾಥಮಿಕ ಹಂತದಲ್ಲಿ ಒಂದು ತರಗತಿ ಸ್ಕಿಪ್ ಮಾಡಿ ಹೆಚ್ಚುವರಿ ಪ್ರಮೋಷನ್ ನೀಡಿ ಆಕೆಯನ್ನು ಉತ್ತೇಜಿಸಲಾಗಿತ್ತು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಕಾಂ ಪದವಿಯಲ್ಲಿ ಗೋಲ್ಡ್ ಮೆಡಲ್ ಗಳಿಸಿದಾಗ ಅಪ್ಪಾಜಿಗೆ ಎಲ್ಲಿಲ್ಲದ ಸಡಗರ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಉತ್ತೇಜಿಸುತ್ತಿದ್ದರು. ಶಿಸ್ತು, ನಡವಳಿಕೆಯಲ್ಲಿ ವ್ಯತ್ಯಾಸವಾಗದಂತೆ ಗಮನ ಹರಿಸುತ್ತಿದ್ದರು.
ಅಪ್ಪಾಜಿ ವಿರೋಧ ಪಕ್ಷದ ನಾಯಕ, ಡಿಸಿಎಂ, ಸಿಎಂ ಆಗಿದ್ದಾಗ ಮಾತ್ರ ಚಾರಿಟಿ ಮಾಡುತ್ತಿದ್ದಿಲ್ಲ. ಜೇಬಿನಲ್ಲಿ ಏನಿತ್ತೋ ಅದನ್ನೆಲ್ಲಾ ಇತರರಿಗೆ ತೆಗೆದುಕೊಡುವ ಮನಃಸ್ಥಿತಿ ಮೊದಲಿನಿಂದಲೂ ಇತ್ತು. ಅವರು ಸಿಎಂ ಆಗಿದ್ದಾಗ ಒಮ್ಮೆ ನಾನು ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಿದ್ದೆ, ಅಪ್ಪಾಜಿಗೆ ದಿನಾ ಬೆಳಿಗ್ಗೆ ವಾಕ್ ಮಾಡುವ ಅಭ್ಯಾಸ ಇತ್ತು. ಅವರ ಜತೆ ಆ ದಿನ ನಾನೂ ವಾಕಿಂಗ್ಗೆ ಸೇರಿಕೊಂಡೆ. ಆಗ ಅವರು ಸಿಎಂ ಕ್ವಾರ್ಟರ್ಸ್ನಲ್ಲಿದ್ದರು. ಇಬ್ಬರು ದಂಪತಿ ಕಾಂಪೌಂಡ್ ಹೊರಭಾಗದಲ್ಲಿ ನಿಂತಿದ್ದರು. ಅವರನ್ನು ನೋಡಿ ಅಪ್ಪಾಜಿ ಒಳಗೆ ಕರೆಯುವಂತೆ ಸೂಚಿಸಿದರು. ಆ ತಾಯಿಯ ಮುಖದಲ್ಲಿ ತುಂಬಾ ಚಿಂತೆಯಿತ್ತು. ಅವರು ‘ನನ್ನ ಮಗಳನ್ನು ಕಾಲೇಜಿಗೆ ಸೇರಿಸಲು ಇಂದು ಕೊನೆಯ ದಿನ, ಹಣದ ಅವಶ್ಯಕತೆ ತುಂಬಾ ಇದೆ, ನಿಮ್ಮ ಹತ್ತಿರ ಹಣ ಬೇಡುವುದಕ್ಕೆ ಬಂದಿದ್ದೇನೆ’ ಎಂದರು. ತಕ್ಷಣ ತಂದೆಯವರು ಆ ದಂಪತಿಗೆ 2 ಲಕ್ಷ ರೂ. ಕೊಡುವಂತೆ ಸೂಚಿಸಿದರು. ನಾನು ಅವರಿಗೆ ಹಣ ಕೊಡಿಸುವ ವ್ಯವಸ್ಥೆ ಮಾಡಿದೆ. ದಾಖಲೀಕರಣಕ್ಕೆ ಹಣ ಪಡೆದವರ ಮಾಹಿತಿ ಸೇರಿಸಬೇಕಿತ್ತು. ಆದರೆ ಹಣ ಪಡೆದ ದಂಪತಿ ಮಾಯವಾಗಿದ್ದರು. ಅಪ್ಪಾಜಿ ಸ್ನಾನ ಮುಗಿಸಿ ಬಂದ ತಕ್ಷಣ ‘ಆ ದಂಪತಿ ಸುಳ್ಳು ಕಾರಣ ನೀಡಿ ಹಣ ಪಡೆದು ಹೋಗಿದ್ದಾರೆ’ ಎಂದು ಅರ್ಥೈಸುವ ಪ್ರಯತ್ನ ಮಾಡಿದೆ. ಆದರೆ ಅಪ್ಪಾಜಿ ‘ಒಬ್ಬ ಹೆಣ್ಣು ಮಗಳು ಕಣ್ಣೀರು ಹಾಕ್ಕೊಂಡು ಬಂದಿದ್ದಾಳೆ ಎಂದರೆ ಅವಳು ಖಂಡಿತ ಆ ಹಣವನ್ನು ಒಳ್ಳೆಯದಕ್ಕೇ ಉಪಯೋಗಿಸುತ್ತಾಳೆ’ ಎಂದರು. ಇಂಥ ಹಲವು ವಿಚಾರಗಳು ದಿನನಿತ್ಯದ ಬದುಕಿನಲ್ಲಿ ನಡೆಯುತ್ತಿದ್ದವು. ಹೋಟೆಲ್ಗೆ ಹೋದರೆ ಕ್ಲೀನಿಂಗ್ ಮಾಡುವ ಹುಡುಗರಿಗೆ ಜೇಬಲ್ಲಿ ಇರುವ ಹಣವನ್ನು ತೆಗೆದುಕೊಡುವ ಅಭ್ಯಾಸ ಅವರದು. ಇನ್ನೊಂದು ಘಟನೆ ನೆನಪಾಗುತ್ತದೆ. ಇನ್ನೂ ವಿಜಯೇಂದ್ರ, ರಾಘವೇಂದ್ರ ಹುಟ್ಟಿರಲಿಲ್ಲ. ಅಮ್ಮ ಒಮ್ಮೆ ಊರಿಗೆ ಹೋಗಿದ್ದರು. ನಾವೆಲ್ಲ ಬಹಳ ಸಣ್ಣವರಿದ್ದೆವು. ನಮ್ಮ ಜವಾಬ್ದಾರಿಯನ್ನು ಅಪ್ಪ ನೋಡಿಕೊಳ್ಳಬೇಕಿತ್ತು. ಅಪ್ಪ ತಾವೇ ಉಪ್ಪಿಟ್ಟು ತಯಾರಿಸಿದರು. ನಮಗೆಲ್ಲ ಬಡಿಸಿದರು. ಅಂದು ನಮ್ಮ ತೋಟ ನೋಡಿಕೊಳ್ಳುತ್ತಿದ್ದ ನಾರಣಪ್ಪ ಬಂದಿದ್ದರು. ಅವರನ್ನೂ ಕೂರಿಸಿ ಅಪ್ಪಾಜಿ ತಾವೇ ಉಪ್ಪಿಟ್ಟು ಬಡಿಸಿದರು. ಅವರ ಪ್ರೀತಿಗೆ ನಾರಣಪ್ಪ ನಾಚಿದ್ದು, ಗೌರವ ತೋರಿದ್ದು ಇನ್ನೂ ನೆನಪಿದೆ. ಇಂದಿಗೂ ಉಪ್ಪಿಟ್ಟು ನೋಡಿದಾಗೆಲ್ಲ ಈ ಘಟನೆ ನೆನಪಾಗುತ್ತದೆ. ಅಪ್ಪಾಜಿ ನಾಲ್ಕು ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಸಂಕಷ್ಟ ಅನುಭವಿಸಿದವರು. ತಾಯಿಯಿಲ್ಲದ ಮಗುವಿನ ಬದುಕಿನ ಪಯಣ ಇತರರ ಅನುಭವಕ್ಕೆ ದಕ್ಕಲಾರದು. ಸಣ್ಣ ವಯಸ್ಸಿನಲ್ಲೇ ಸವಾಲುಗಳನ್ನು ಸ್ವೀಕರಿಸುವ ಹಾದಿಯಲ್ಲಿ ಅಪ್ಪಾಜಿ ಅಕ್ಕಿ ಗಿರಣಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡಿದ್ದಾರೆ. ಸಣ್ಣ ಹಾರ್ಡ್
ವೇರ್ ಅಂಗಡಿ ತೆರೆದು ಬದುಕಲು ಪ್ರಯತ್ನಿಸಿದ್ದಾರೆ. ಹಡ್ಸನ್ ಆಂಡ್ ಕಂಪನಿಯಲ್ಲಿ ಟೈಪಿಸ್ಟ್ ಆಗಿದ್ದರು. ಈ ಎಲ್ಲ ಹೊತ್ತಿನಲ್ಲೂ ಅಪ್ಪಾಜಿಯ ಒಳಗೆ ನಾಡನ್ನಾಳುವ ಯಶಸ್ವೀ ನಾಯಕನೊಬ್ಬ ಇದ್ದ ಎಂಬುದನ್ನು ನೆನೆದರೆ ರೋಮಾಂಚಿತಳಾಗುತ್ತೇನೆ. ಎಂಥಾ ಧೀಮಂತ ವ್ಯಕ್ತಿತ್ವವೊಂದರ ಕರುಳ ಕುಡಿ ನಾನು ಎಂದು ನೆನೆಸಿಕೊಂಡರೆ ಸಂಭ್ರಮ, ಅಚ್ಚರಿ, ಹೆಮ್ಮೆಯ ಜತೆಗೆ ಸಾರ್ಥಕತೆಯಿಂದ ಕರಗುತ್ತೇನೆ, ವಿನೀತಳಾಗುತ್ತೇನೆ.
-(ಲೇಖಕರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರಿ)