ದೇವನಹಳ್ಳಿ ತಾಲೂಕು ಕಾರಹಳ್ಳಿ ಕ್ರಾಸ್ ಬಳಿ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ನಾಗವೇಣಿ, ದೇವನಹಳ್ಳಿ ಮಂಡಲದ ಅಧ್ಯಕ್ಷ ಎನ್.ಎಲ್.ಅಂಬರೀಷ್ ಗೌಡ ಇತರರು ಇದ್ದರು.
ಕುಂದಾಣ : ಬಿಜೆಪಿ ತತ್ವ- ಸಿದ್ಧಾಂತ, ಸಂಘಟನಾ ಮೌಲ್ಯಗಳು, ನಾಯಕತ್ವ ಗುಣಗಳ ಬೆಳವಣಿಗೆ, ಕೇಂದ್ರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಮತ್ತು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು ಈ ಪ್ರಶಿಕ್ಷಣದ ಮುಖ್ಯಗುರಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ದೇವನಹಳ್ಳಿ ತಾಲೂಕು ಕಾರಹಳ್ಳಿ ಕ್ರಾಸ್ ಬಳಿ ಖಾಸಗಿ ಹೋಟಲ್ನಲ್ಲಿ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ&2026 ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ 1,156 ಸ್ಥಳಗಳಲ್ಲಿ ಈ ತರಬೇತಿ ವರ್ಗಗಳನ್ನು ನಡೆಸಲಾಗುತ್ತಿದ್ದು, ಈ ಮೂಲಕ 2 ಲಕ್ಷಕ್ಕೂ ಹೆಚ್ಚು ಪದಾಧಿಕಾರಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ, ಸಂಘಟನೆಯ ಬಲವರ್ಧನೆ ಹಾಗೂ ಜನಸೇವೆಯ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 2 ದಿನ ಪ್ರಶಿಕ್ಷಣ ವರ್ಗ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಂಸದ ಸುಧಾಕರ್ ಮಾತನಾಡಿ, ಪಕ್ಷದ ಸಿದ್ಧಾಂತ ಮತ್ತು ರಾಷ್ಟ್ರ ನಿಮಾರ್ಣದಲ್ಲಿ ಕಾರ್ಯಕರ್ತರ ಪಾತ್ರದ ಬಗ್ಗೆ ತಜ್ಞರು ಮತ್ತು ಹಿರಿಯ ನಾಯಕರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗುತ್ತದೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಗಮನಕ್ಕೆ ತರುವ ಬಗ್ಗೆಯೂ ಕಾರ್ಯಕರ್ತರಿಗೆ ಮಾಹಿತಿ ನೀಡಲಾಗುತ್ತಿದೆ. ಪಕ್ಷದ ಬೂತ್ಮಟ್ಟದ ಕಾರ್ಯಕರ್ತರಿಂದ ಹಿಡಿದು ಜಿಲ್ಲಾಮಟ್ಟದ ಪದಾಧಿಕಾರಿಗಳವರೆಗೆ ಸಂಘಟನಾ ಬಲ ವೃದ್ಧಿಸಲು ಸಹಾಯ ಮಾಡುವೆ ಎಂದರು.
ಒಬಿಸಿ ಘಟಕದ ಅಧ್ಯಕ್ಷ ಬಿ.ಕೆ.ನಾರಾಯಣ ಸ್ವಾಮಿ, ಹಿರಿಯ ಮುಖಂಡ ಪ್ರಭಾಕರ್, ಮುಖಂಡರಾದ ಚನ್ನಕೇಶವ, ವೆಂಕಟೇಗೌಡ, ಮಹಿಳಾ ಘಟಕದ ನಯನಾ, ಯಶೋಧಾ, ತಾಯಮ್ಮ, ಭಾಗ್ಯಮ್ಮ, ದಿವ್ಯಾ ಇತರರು ಇದ್ದರು.