ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಿಐಟಿಯು ಪದಾಧಿಕಾರಿಗಳು ನಾಲ್ಕು ಕಾರ್ಮಿಕ ಕಾಯಿದೆ ವಿರೋಧಿಸಿ ಕರಾಳ ದಿನ ಆಚರಿಸಿದರು. ಲಕ್ಷ್ಮಣ ಹಂದ್ರಾಳ, ಅಣ್ಣಾರಾಯ ಈಳಗೇರಿ, ಸುರೇಶ ಜೀಬಿ, ಭೀಮರಾಯ ಪೂಜಾರಿ, ಸುನಂದಾ ನಾಯಕ ಮತ್ತಿತರರಿದ್ದಾರೆ.
ವಿಜಯಪುರ:ಕೇಂದ್ರ ಸರ್ಕಾರ ಜಾರಿಗೆ ಮುಂದಾದ ನಾಲ್ಕು ಕಾರ್ಮಿಕೆ ಕಾಯಿದೆ ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ವತಿಯಿಂದ ಬುಧವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕರಾಳ ದಿನ ಆಚರಿಸಲಾಯಿತು.
ಸಿಐಟಿಯು ಸಂಚಾಲಕ ಲಕ್ಷ್ಮಣ ಹಂದ್ರಾಳ ಮಾತನಾಡಿ, ಏಪ್ರಿಲ್ ಒಂದರಂದೇ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮಗಳನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ವ್ಯವಹಾರ ಮಾಡಲು ಸುಲಭತೆ ಎಂಬ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರವಾದ ಈ ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ವಿರೋಧಿಸುತ್ತಿದ್ದು, ನಾಲ್ಕು ಕಾಯಿದೆಗಳನ್ನು ರದ್ದುಪಡಿಸಬೇಕು. 2026 ಫೆ. 12ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆಗೆ ಮುಂದೆ ಬಂದಿಲ್ಲ. ಕೂಡಲೇ ಕಾರ್ಮಿಕ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಸಹ ಸಂಚಾಲಕ ಅಣ್ಣಾರಾಯ ಈಳಗೇರಿ ಮಾತನಾಡಿ, ಕಾರ್ಮಿಕ ಸಂಹಿತೆಗಳ ರಚನೆಯ ಹಂತದಿಂದಲೂ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಭಾರತದ ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದಂತಹ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಭಾರತೀಯ ಕಾರ್ಮಿಕ ಸಮ್ಮೇಳನ ಕರೆದಿಲ್ಲ. ಸದರಿ ಕಾಯಿದೆಗಳು ಕಾರ್ಮಿಕರನ್ನು ಮತ್ತೆ ಬ್ರಿಟಿಷ್ ವಸಾಹತು ಕಾಲದ ಶೋಷಣಾತ್ಮಕ ಪರಿಸ್ಥಿತಿಗಳಿಗೆ ತಳ್ಳಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹ ಸಂಚಾಲಕ ಸುರೇಶ ಜೀಬಿ ಮಾತನಾಡಿದರು. ರೈತ ಸಂಘದ ಮುಖಂಡ ಭೀಮರಾಯ ಪೂಜಾರಿ, ಸುನಂದಾ ನಾಯಕ, ಸುಮಂಗಲಾ ಆನಂದಶೆಟ್ಟಿ ಮಾತನಾಡಿದರು.
ಮುಖಂಡರಾದ ನಾರಾಯಣ ಬಡಿಗೇರ, ಲಾಲಹ್ಮದ ಶೇಖ, ಚಂದ್ರಶೇಖರ ವಾಲಿಕಾರ, ಎಂ.ಎಸ್. ಕೊಂಡಗೂಳಿ, ಸುರೇಖಾ ವಾಗ್ಮೋರೆ, ಸುವರ್ಣ ಹಲಗಣಿ ಮತ್ತಿತರರಿದ್ದರು.