ವಿದ್ಯುತ್ ಖಾಸಗೀಕರಣಕ್ಕೆ ವಿರೋಧ

ವಿದ್ಯುತ್‌ನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಲು ನಡೆಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ತಹಸೀಲ್ದಾರ್ ಸಂಜಯ ಇಂಗಳೆ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದರು. ದಯಾನಂದ ಕೋಳಿ, ಮುರುಗೇಶ್ ಶಿಂಪಿ, ನಾಗನಾಥಗೌಡ ಬಿರಾದಾರ ಮತ್ತಿತರರಿದ್ದರು.
ವಿದ್ಯುತ್‌ನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಲು ನಡೆಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ತಹಸೀಲ್ದಾರ್ ಸಂಜಯ ಇಂಗಳೆ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದರು. ದಯಾನಂದ ಕೋಳಿ, ಮುರುಗೇಶ್ ಶಿಂಪಿ, ನಾಗನಾಥಗೌಡ ಬಿರಾದಾರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ರೈತ ಸಂಘದಿಂದ ಒತ್ತಾಯ
  • ತಹಸೀಲ್ದಾರ್‌ರಿಗೆ ಮನವಿ
ಚಡಚಣ : ವಿದ್ಯುತ್ ಸಂಸ್ಥೆಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಶುಕ್ರವಾರ ತಹಸೀಲ್ದಾರ್ ಸಂಜಯ ಇಂಗಳೆ ಹಾಗೂ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ್ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ ಮಾತನಾಡಿ, ರೈತರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹೆಸ್ಕಾಂ ಕಂಪನಿಯನ್ನು ಖಾಸಗೀಕರಣ ಮಾಡ ಬಾರದು, ಮುಂಚಿನಂತೆಯೇ ಸರ್ಕಾರವೇ ಇದನ್ನು ನಡೆಸಿಕೊಂಡು ಹೋಗಬೇಕೆಂದು ಒತ್ತಾಯಿಸಿದರು.
ಈಗಾಗಲೇ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿರುವ ರೈತರಿಗೆ ವಿದ್ಯುತ್ ಖಾಸಗೀಕರಣ ಮಾಡಿದರೆ ಕೃಷಿ ಮಾಡುವುದೇ ಕಷ್ಟವಾಗಿ ಮುಂದಿನ ದಿನಗಳಲ್ಲಿ ಅನ್ನಕ್ಕೂ ಪರದಾಡುವ ಸ್ಥಿತಿ ಬರಬಹುದು. ಹೆಸ್ಕಾಂ ಇಲಾಖೆಯು ಸಾರ್ವಜನಿಕರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯುತ್ ಕಂಬ, ವೈರ್ ಹಾಗೂ ಟಿಸಿಗಳನ್ನು ಖಾಸಗಿ ಕಂಪನಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಹೆಸ್ಕಾಂ ಇಲಾಖೆಯಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಕಾರ್ಮಿಕರ ಮತ್ತು ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳ ಬದುಕು ಖಾಸಗೀಕರಣದಿಂದ ಬೀದಿಗೆ ಬೀಳುವ ಆತಂಕವಿದೆ ಎಂದರು.
ಪ್ರಸ್ತುತ ಜಾರಿಯಲ್ಲಿರುವ ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್, ಗೃಹ ಜ್ಯೋತಿ, ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಮುಂತಾದ ಜನಪರ ಯೋಜನೆಗಳು ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಆಗ್ರಹಿಸಿದರು. ಖಾಸಗೀಕರಣದ ಈ ಪರವಾನಗಿ ಪ್ರಕ್ರಿಯೆಯನ್ನು ಕೂಡಲೇ ಕೈಬಿಡದಿದ್ದರೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ ಅತ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ದಯಾನಂದ ಕೋಳಿ, ಮುರುಗೇಶ್ ಶಿಂಪಿ, ನಾಗನಾಥಗೌಡ ಬಿರಾದಾರ, ವಸಂತ ಬೈರಾಮಡಿ, ಪ್ರಕಾಶ ಭತಗುಣಕಿ, ಪ್ರವೀಣ ಬಿರಾದಾರ, ದಲಿತ ಸೇನೆ ತಾಲೂಕಾಧ್ಯಕ್ಷ ರಮೇಶ ಬೆಳ್ಳೆನವರ, ಮಂಜುಳಾ ಪೂಜಾರಿ, ಗೇನಪ್ಪಾ ಬಿರಾದಾರ, ಅಣ್ಣಾ ಪೂಜಾರಿ, ದಾನಮ್ಮ ಗೌಡತಿ ಪಾಟೀಲ, ರಮೇಶ ಭತಗುಣಕಿ, ಮಹಾದೇವ ಕರ್ಲಮಳ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net