ವಿದ್ಯುತ್ ಖಾಸಗೀಕರಣಕ್ಕೆ ವಿರೋಧ

ಮುಧೋಳದ ಕಾನಿಪ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾ ಡಿದರು. ಕಬ್ಬು ಬೆಳೆಗಾರರ ಸಂಘದ ಮುಖಂಡ ದುಂಡಪ್ಪ ಯರಗಟ್ಟಿ, ಸುಭಾಸ ಶಿರಬೂರ, ಅಶೋಕ ಪಡಸಲಗಿ, ಸುರೇಶ ಚಿಂಚಲಿ ಇತರರಿದ್ದರು.
ಮುಧೋಳದ ಕಾನಿಪ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾ ಡಿದರು. ಕಬ್ಬು ಬೆಳೆಗಾರರ ಸಂಘದ ಮುಖಂಡ ದುಂಡಪ್ಪ ಯರಗಟ್ಟಿ, ಸುಭಾಸ ಶಿರಬೂರ, ಅಶೋಕ ಪಡಸಲಗಿ, ಸುರೇಶ ಚಿಂಚಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಘದ ಜಿಲ್ಲಾ ಅಧ್ಯಕ್ಷ ಬಸವಂತ ಕಾಂಬಳೆ ಹೇಳಿಕೆ
  • ವಿದ್ಯುತ್ ಖಾಸಗೀಕರಣಕ್ಕೆ ವಿರೋಧ ಸಸಾಲಟ್ಟಿ ಯೋಜನೆಗೆ ಆಗ್ರಹ
ಮುಧೋಳ: ವಿದ್ಯುತ್ ವಲಯದ ಖಾಸಗೀಕರಣ ಹುನ್ನಾರ ವಿರೋಧಿಸಿ ಮತ್ತು ದಶಕಗಳ ಬೇಡಿಕೆ ಸಸಾಲಟ್ಟಿ ಏತ ನೀರಾವರಿ ಯೋಜನೆ ಜಾರಿಯಲ್ಲಿನ ವಿಳಂಬ ಧೋರಣೆ ಖಂಡಿಸಿ ಅಹೋರಾತ್ರಿ ಹೋರಾಟ ಆರಂಭಿಸಲಾಗುವುದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಸಾಲಟ್ಟಿ ಯೋಜನೆಗೆ ಹಿಂದಿನ ಸರ್ಕಾರಗಳು ಕೇವಲ ಭರವಸೆಗಳನ್ನು ನೀಡಿವೆ. ಆದರೆ ಜಾರಿಗೆ ತರುವಲ್ಲಿ ಸಂಪೂರ್ಣ ವಿಲವಾಗಿವೆ. ಎಂ.ಬಿ. ಪಾಟೀಲರು ಸಚಿವರಾಗಿದ್ದಾಗ ಉಂಟಾದ ಉದಾಸೀನತೆ ಹಾಗೂ ನಂತರದ ದಿನಗಳಲ್ಲಿ ಕೋಟ್ಯಂತರ ರೂಪಾಯಿ ಖರ್ಚಾದರೂ ಯೋಜನೆ ಪೂರ್ಣಗೊಳ್ಳದಿರುವುದು ದುರದೃಷ್ಟಕರ. ವಿದ್ಯುತ್ ಸಂಪರ್ಕದ ನೆಪವೊಡ್ಡಿ ಕಾಮಗಾರಿ ಸ್ಥಗಿತಗೊಳಿಸಿರುವುದು ರೈತರ ಬದುಕಿನೊಂದಿಗೆ ಚೆಲ್ಲಾಟ ಆಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗೀಕರಣಕ್ಕೆ ಬ್ರೇಕ್ ಹಾಕಿ: ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ನೀತಿ ತೀವ್ರವಾಗಿ ಖಂಡಿಸಿದ ರೈತ ಮುಖಂಡರು ನಮಗೆ ಉಚಿತ ವಿದ್ಯುತ್ ಬೇಡ, ಬದಲಿಗೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ದರದ ಬಿಲ್ ನೀಡಿ, ಅದನ್ನು ನಾವು ಪ್ರಾಮಾಣಿಕವಾಗಿ ಪಾವತಿಸುತ್ತೇವೆ. ಆದರೆ ಸರ್ಕಾರವೇ ವಿದ್ಯುತ್ ನಿಗಮವನ್ನು ಮುಂದುವರಿಸಬೇಕು. ಎಸ್.ಎಂ. ಕೃಷ್ಣಾ ಸರ್ಕಾರದ ಅವಧಿಯಲ್ಲಿ ನಡೆದ ರೈತರ ಹೋರಾಟ ಸರ್ಕಾರ ಮರೆಯಬಾರದು. ಮುಂಬರುವ ದಿನಗಳಲ್ಲಿ ಜನಪ್ರತಿನಿಧಿಗಳು ಗ್ರಾಮಗಳಿಗೆ ಬಂದರೆ ರೈತರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಂಧೆ: ಕೃಷಿ ವಲಯದಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳನ್ನು ಎತ್ತಿ ತೋರಿಸಿದ ಮುಖಂಡರು, ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಟಿಸಿ ದರ ಏರಿಕೆ ಮಾಡುತ್ತಿರುವ ಹಿಂದೆ ಅಧಿಕಾರಿಗಳು ಮತ್ತು ಸಚಿವರ ಶಾಮೀಲು ಆಗಿರುವ ಬಗ್ಗೆ ಸಂಶಯ ಕಾಡುತ್ತಿದೆ. ಪ್ರಧಾನಿ ಮೋದಿ ಉತ್ತಮ ಎಣ್ಣೆ ಸೇವನೆಯ ಬಗ್ಗೆ ಮಾತನಾಡುತ್ತಾರೆ, ಆದರೆ ಕಳೆದ ನಾಲ್ಕು ವರ್ಷಗಳಿಂದ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಮತ್ತು ಶೇಂಗಾ ಬಿತ್ತನೆ ಬೀಜವೇ ಸಿಗುತ್ತಿಲ್ಲ. ಬೀಜವಿಲ್ಲದೆ ರೈತರು ಬೆಳೆಯುವುದು ಹೇಗೆ? ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತವು ಮುಂದಿನ ಮೂರು ದಿನಗಳೊಳಗೆ ಮುಧೋಳದಲ್ಲಿ ರೈತರ ವಿಶೇಷ ಸಭೆ ಕರೆದು, ಸಸಾಲಟ್ಟಿ ಯೋಜನೆ ಹಾಗೂ ಕೃಷಿ ಸಮಸ್ಯೆಗಳನ್ನು ಬಗೆಹರಿಸಬೇಕು. ತಪ್ಪಿದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದವು.
ಕಬ್ಬು ಬೆಳೆಗಾರರ ಸಂಘದ ಮುಖಂಡ ದುಂಡಪ್ಪ ಯರಗಟ್ಟಿ, ಸುಭಾಸ್ ಶಿರಬೂರ, ಅಶೋಕ ಪಡಸಲಗಿ, ಸುರೇಶ ಚಿಂಚಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net