ಡಾಂಬರ್, ಮಿಕ್ಸಿಂಗ್ ಘಟಕಗಳಿಗೆ ವಿರೋಧ

ಪೊನ್ನಂಪೇಟೆ ಸಮೀಪದ ಹಾತೂರಿನಲ್ಲಿ ಡಾಂಬರ್ ಹಾಗೂ ಸಿಮೆಂಟ್ ಮಿಕ್ಸಿಂಗ್ ಘಟಕದ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭ ಗುಮ್ಮಟ್ಟೀರ ಕಿಲನ್ ಗಣಪತಿ, ದರ್ಶನ್, ವಾಸು, ಶ್ರೀಮಂತ್,ವಿಶು, ಸುಜಿತ್ ಇತರರು ಇದ್ದರು.
ಪೊನ್ನಂಪೇಟೆ ಸಮೀಪದ ಹಾತೂರಿನಲ್ಲಿ ಡಾಂಬರ್ ಹಾಗೂ ಸಿಮೆಂಟ್ ಮಿಕ್ಸಿಂಗ್ ಘಟಕದ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭ ಗುಮ್ಮಟ್ಟೀರ ಕಿಲನ್ ಗಣಪತಿ, ದರ್ಶನ್, ವಾಸು, ಶ್ರೀಮಂತ್,ವಿಶು, ಸುಜಿತ್ ಇತರರು ಇದ್ದರು.
Published on
ಪೊನ್ನಂಪೇಟೆ: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಂಬರ್ ಮತ್ತು ಸಿಮೆಂಟ್ ಮಿಕ್ಸಿಂಗ್ ಘಟಕದಿಂದ ಸ್ಥಳೀಯ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಹಾತೂರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಮ್ಮಟ್ಟಿರ ದರ್ಶನ್ ನಂಜಪ್ಪ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲ್ಲನ್ ಗಣಪತಿ ನೇತೃತ್ವದಲ್ಲಿ ಗ್ರಾಮಸ್ಥರು, ಡಾಂಬರು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ಅಡಗಟ್ಟಿ ಕುಂದ ಬಿ ಶೆಟ್ಟಿಗೇರಿ ಮುಖ್ಯರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬೆಳಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಗೋಣಿಕೊಪ್ಪ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರದೀಪ್ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಈ ಸಂದರ್ಭ ಸ್ಥಳೀಯ ತೀತಮಾಡ ಸುಜಿತ್ ಮಾತನಾಡಿ, ಮೂರು ಡಾಂಬರ್ ಹಾಗೂ ಒಂದು ಸಿಮೆಂಟ್ ಮಿಕ್ಸಿಂಗ್ ಘಟಕದಿಂದ ಗ್ರಾಮಸ್ಥರ ಆರೋಗ್ಯ ಹಾಳಾಗುತ್ತಿದೆ. ಜತೆಗೆ ಉತ್ತಮ ಪರಿಸರಕ್ಕೂ ಧಕ್ಕೆಯಾಗಿದೆ ಎಂದು ದೂರಿದರು.

ಗ್ರಾಮ ಸಭೆಯಲ್ಲಿ ಈ ಹಿಂದೆ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಘಟಕಗಳ ಪರವಾನಗಿ ನವೀಕರಣ ಮಾಡದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಜತೆಗೆ ಪರವಾನಗಿ ನವೀಕರಣಕ್ಕೆ ಹಾತೂರು ಗ್ರಾಪಂ ಎನ್‌ಒಸಿ ಸಹ ನೀಡಿಲ್ಲ. ಹೀಗಿದ್ದರೂ ಡಾಂಬರ್ ಹಾಗೂ ಸಿಮೆಂಟ್ ಮಿಕ್ಸಿಂಗ್ ಘಟಕಗಳನ್ನು ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಜ.12ರಂದು ಗೋಣಿಕೊಪ್ಪ ಠಾಣೆಗೆ ಹಾಗೂ ವಿರಾಜಪೇಟೆ ತಹಸೀಲ್ದಾರ್ ಕಚೇರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ. ತಾಲೂಕು ಆಡಳಿತ ಮಿಕ್ಸಿಂಗ್ ಘಟಕ ಮುಚ್ಚಲು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ಡಾಂಬರ್ ಮಿಕ್ಸಿಂಗ್ ಘಟಕಕ್ಕೆ ಅನುಮತಿ ಪಡೆದುಕೊಂಡಿದ್ದೇನೆ. ಪರಿಸರ ಮಾಲಿನ್ಯ ಆಗುತ್ತಿಲ್ಲ. ಘಟಕವನ್ನು ಮುಂದುವರಿಸುತ್ತೇನೆ ಎಂದು ಸ್ಥಳಕ್ಕೆ ಆಗಮಿಸಿದ ಗುತ್ತಿಗೆದಾರ ಪ್ರತಿಭಟನಾಕಾರರಿಗೆ ಹೇಳಿದ್ದಾರೆ ಎನ್ನಲಾಗಿದೆ. ನಿಮಗೆ ಘಟಕ ಮುಂದುವರಿಸುವುದು ಮುಖ್ಯವಾದರೆ ಗ್ರಾಮಸ್ಥರ ಆರೋಗ್ಯ ಮುಖ್ಯ ಆಗುವುದಿಲ್ಲವೇ ಎಂದು ಪ್ರತಿಭಟನೆಯಲ್ಲಿದ್ದ ಮಹಿಳೆಯರು ಪ್ರಶ್ನಿಸಿದ್ದರು ಎನ್ನಲಾಗಿದೆ. ಪ್ರಮುಖರಾದ ತೀತಮಾಡ ವಾಸು ಗಣಪತಿ, ತೀತಮಾಡ ಶಿವಮಣಿ ಕರುಂಬಯ್ಯ, ಚೇಮಿರ ಮೇದಪ್ಪ, ತೀತಮಾಡ ಸುಜಿತ್, ಅಯ್ಯಪ್ಪ, ಶ್ರೀಮಂತ್ ಮುತ್ತಣ್ಣ, ಪೂವಣ್ಣ, ಬೋಪಯ್ಯ, ವಿಶು, ಪ್ರಕಾಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net