ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ವಿಪಕ್ಷಗಳಿಂದ ಅಪಪ್ರಚಾರ

ಹುಣಸೂರು ತಾಲೂಕು ಸಿಂಗರಮಾರನಹಳ್ಳಿಯ ನೂತನ ಗ್ರಾ.ಪಂ.ಕಟ್ಟಡವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಗ್ರಾ.ಪಂ.ಅಧ್ಯಕ್ಷ ದೇವರಾಜ್, ಸತೀಶ್ ಪಾಪಣ್ಣ ಇತರರಿದ್ದಾರೆ.
ಹುಣಸೂರು ತಾಲೂಕು ಸಿಂಗರಮಾರನಹಳ್ಳಿಯ ನೂತನ ಗ್ರಾ.ಪಂ.ಕಟ್ಟಡವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಗ್ರಾ.ಪಂ.ಅಧ್ಯಕ್ಷ ದೇವರಾಜ್, ಸತೀಶ್ ಪಾಪಣ್ಣ ಇತರರಿದ್ದಾರೆ.
Published on
ಹುಣಸೂರು: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ವಿಬಿ ಜಿ ರಾಮ್ ಜಿ ಕಾಯ್ದೆಯ ಕುರಿತು ವಿಪಕ್ಷಗಳು ನಡೆಸುತ್ತಿರುವ ಅಪಪ್ರಚಾರಕ್ಕೆ ಜನತೆ ಕಿವಿಗೊಡದೆ ಗ್ರಾಮಗಳಲ್ಲಿ ಶಾಶ್ವತ ಸಂಪತ್ತು ಸ್ಥಾಪನೆಗೆ ಕಾಯ್ದೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.
ಸೋಮವಾರ ತಾಲೂಕಿನ ಗಡಿಗ್ರಾಮ ಸಿಂಗರಮಾರನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರ ಹಾಗೂ ಕರಿಮುದ್ದನಹಳ್ಳಿಯ ಗ್ರಾ.ಪಂ. ಕಟ್ಟಡದಲ್ಲಿ ನೂತನ ಸಭಾಂಗಣ ಉದ್ಘಾಟಿಸಿ ಸಿಂಗರಮಾರನಹಳ್ಳಿಯಲ್ಲಿ ಮಾತನಾಡಿದರು.
ನರೇಗಾ ಯೋಜನೆಯ ಹಲವು ನೂನ್ಯತೆಗಳನ್ನು ಸರಿಪಡಿಸಿ ಸಂಸತ್ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಕಾಯ್ದೆ ಜಾರಿಗೊಳಿಸಲಾಗಿದೆ. ಅತ್ಯಂತ ಪಾರದರ್ಶಕ ಮತ್ತು ಉತ್ತಮ ಯೋಜನೆಯಾಗಿ ವಿಬಿ ಜಿರಾಮ್‌ಜಿ ಜಾರಿಗೊಂಡಿದೆ. ನರೇಗಾ ಯೋಜನೆಯಡಿ ಈ ಹಿಂದೆ 100 ದಿನಗಳ ಕೂಲಿ ದಿನ ಇತ್ತು. ಇದೀಗ ಇದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ರಾ.ಪಂ.ಗಳಿಗೆ ತಮ್ಮ ಗ್ರಾಮದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಾಯ್ದೆ ಸಂಪೂರ್ಣ ಅಧಿಕಾರ ನೀಡಿದೆ. ನಿಮ್ಮೂರಿನ ರಸ್ತೆ, ಚರಂಡಿ, ಸೇತುವೆ, ಕಾಡಂಚಿನ ಗ್ರಾಮಗಳಲಿ ತಡೆಗೋಡೆ ಇನ್ನಾವುದೇ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಯೋಜನೆಗಳಿಗೆ ವಿಬಿ ಜಿ ರಾಮ್‌ಜೀ ಕಾಯ್ದೆ ಬಳಸಿಕೊಳ್ಳಬಹುದಾಗಿದೆ ಎಂದರು.
ಕೇಂದ್ರದ ಯೋಜನೆಗಳಿಗೆ ಅಡ್ಡಿ
ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ(ಕರ್ನಾಟಕ ಸೇರಿದಂತೆ) ಕೇಂದ್ರದ ಹಲವಾರು ಜನಪರ ಮತ್ತು ಪಗತಿಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಪಕ್ಷ ಸಹಕರಿಸದಿರುವುದು ವಿಪರ್ಯಾಸವೇ ಸರಿ. ಆಯುಷ್ಮಾನ್ ಯೋಜನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಜನರು ಇದೆಲ್ಲವನ್ನು ಅರಿತು ಕೇಂದ್ರ ಸರ್ಕಾರದ ವಿಕಸಿತ ಭಾರತದ ಕನಸಿಗೆ ಬೆಂಬಲವಾಗಿ ನಿಲ್ಲಬೇಕೆಂದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಗೆ 800 ಮನೆಗಳ ನಿರ್ಮಾಣಕ್ಕೆ ಅವಕಾಶ ದೊರಕಿದ್ದು, ಎಲ್ಲರಿಗೂ ಆದ್ಯತೆ ಮೇಲೆ ವಿತರಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದಾದ ಆರ್ಥಿಕ ಕೊರತೆಗಳ ನಡುವೆ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಈ ನಡುವೆಯೂ ಸಂಸದರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸಿಂಗರಮಾರನಹಳ್ಳಿ ರಸ್ತೆ ಅಭಿವೃದ್ಧಿಗೆ 40 ಲಕ್ಷ ರೂ.ಗಳು ಸೇರಿದಂತೆ ಸಮುದಾಯ ಭವನಗಳ ನಿರ್ಮಾಣಕ್ಕೆ ಒಟ್ಟು 40 ಲಕ್ಷ ರೂ.ಗಳು ಹಾಗೂ ಸಿಂಗರಮಾರನಹಳ್ಳೀ ಕೆರೆ ತುಂಬಿಸುವ ಕಾಮಗಾರಿಗೆ 80 ಲಕ್ಷ ರೂ.ಗಳ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಗ್ರಾ.ಪಂ.ಅಧ್ಯಕ್ಷರಾದ ದೇವರಾಜ್, ಮಹದೇವ್, ಉಪಾಧ್ಯಕ್ಷೆ ಮಂಜುಳಾ, ಜ್ಯೋತಿ, ಸದಸ್ಯ ಅಣ್ಣೇಗೌಡ, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಸತೀಶ್ ಪಾಪಣ್ಣ, ಸುರೇಂದ್ರ, ಸತೀಶ್‌ಕುಮಾರ್ ಇತರರಿದ್ದರು. ಇದೇ ವೇಳೆ ತಾಲೂಕಿನ ಧರ್ಮಾಪುರದಲ್ಲಿ 13 ಲಕ್ಷ ರೂ. ವೆಚ್ಚದಡಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ, ಹರವೆ ಗ್ರಾಮದಲ್ಲಿ ನೂತನ ಗ್ರಾ.ಪಂ.ಕಟ್ಟಡ ಹಾಗೂ ಮೋದೂರು ಗ್ರಾಮದಲ್ಲಿ ಗ್ರಾ.ಪಂ.ಕಟ್ಟಡವನ್ನು ಸಂಸದ ಮತ್ತು ಶಾಸಕರು ಉದ್ಘಾಟಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net