ಸಮಾವೇಶ ಯಶಸ್ಸಿಗೆ ವಿರೋಧಿಗಳೇ ಕಾರಣ

ಶಹಾಪುರದಲ್ಲಿ ಸೋಮವಾರ ಆಯೋಜಿಸಿದ್ದ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಭಾಗವಹಿಸಿರುವ ಕನ್ಹೇರಿ ಶ್ರೀಗಳಿಗೆ ಕೈಮುಗಿದ ನಮಸ್ಕರಿಸುತ್ತಿರುವ ಜನಸ್ತೋಮ.
ಶಹಾಪುರದಲ್ಲಿ ಸೋಮವಾರ ಆಯೋಜಿಸಿದ್ದ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಭಾಗವಹಿಸಿರುವ ಕನ್ಹೇರಿ ಶ್ರೀಗಳಿಗೆ ಕೈಮುಗಿದ ನಮಸ್ಕರಿಸುತ್ತಿರುವ ಜನಸ್ತೋಮ.
Published on

ಪ್ರಮುಖ ಮುಖ್ಯಾಂಶಗಳು

  • ಚರ್ಚೆಗೆ ಗ್ರಾಸವಾದ ಬಸವಾದಿ ಶಿವಶರಣರ ಹಿಂದೂ ಕಾರ್ಯಕ್ರಮ
  • ಮಠಾಧೀಶರ ಒಗ್ಗಟ್ಟು ಪ್ರದರ್ಶನ
  • ಸಮಾವೇಶ ಯಶಸ್ಸಿಗೆ ವಿರೋಧಿಗಳೇ ಕಾರಣ
ಶಹಾಪುರ : ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಬಗ್ಗೆ ಗಿರಿಜಿಲ್ಲೆ ಸೇರಿ ರಾಜ್ಯದ ಉದ್ದಗಲಕ್ಕೂ ಭಾರಿ ಚರ್ಚೆ ಆರಂಭಗೊಂಡಿದೆ. ಹಿಂದುಳಿದ ಜಿಲ್ಲೆಯಲ್ಲಿ ಏನೋ ಒಂದು ಸಣ್ಣ ಪ್ರಮಾಣದ ಸಮಾವೇಶ ನಡೆಯಬಹುದು ಎಂಬ ಕೆಲ ಬುದ್ದೀಜಿವಿಗಳ ತರ್ಕ ಸೋಮವಾರದ ಸಮಾವೇಶ ತಲೆಕೆಳಗಾಗಿಸಿದೆ.
ಹೀಗಾಗಿ ಸಣ್ಣ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಸಮಾವೇಶ ಭಾರಿ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದು ಹೇಗೇ? ಆಯೋಜಕರಿಂದಲೇ ಇದು ಆಯಿತೇ ?, ಇಲ್ಲವೆ ಸಮಾವೇಶ ನಡೆಯಲೇಬಾರದೆಂಬ ಉದ್ದೇಶ ಹೊಂದಿದವರು ಮಾಡಿದ ಪುಕ್ಕಟ್ಟೆ ಪ್ರಚಾರದಿಂದ ಇಷ್ಟೊಂದು ಭರ್ಜರಿ ಯಶಸ್ಸು ಕಾಣಿತೆ ಎಂಬ ಚರ್ಚೆ ಜೋರಾಗಿ ನಡೆದಿದೆ.
ಇಲ್ಲಿನ ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರ ನೇತೃತ್ವದ ವಿವಿಧ ಅನೇಕ ಮಠಾಧೀಶರ ತಂಡ ಮತ್ತು ಇವರಿಗೆ ಸಾಥ್​ ನೀಡಿದ ಅನೇಕ ಸ್ಥಳಿಯರು ತಮ್ಮಷ್ಟಕ್ಕೆ ತಾವೇ ಮೇ 18ರಂದು ಬಸವಾದಿ ಶಿವಶರಣರ ಹಿಂದೂ ಸಮಾವೇಶ ಮಾಡಬೇಕು. ಇದಕ್ಕೆ ಕನ್ಹೇರಿ ಶ್ರೀಗಳನ್ನು ಕರೆಯಿಸಿ ಮಾತಾಡಿಸಬೇಕೆಂಬ ಉದ್ದೇಶದಿಂದ ತಿಂಗಳ ಮೊದಲೆ ತಯಾರಿ ನಡೆಸಿದ್ದರು.
ಯಾವಾಗ ಇದು ಕೆಲ ಪ್ರಗತಿಪರ ಚಿಂತಕರ ಕಿವಿಗೆ ಬಿತ್ತೋ..ಆಗ ಈ ಸಮಾವೇಶದ ಖದರೇ ಬದಲಾಯಿತು. ಯಾಕೆಂದರೆ ಸಮಾವೇಶಕ್ಕೆ ಇನ್ನೂ 15ದಿನಗಳು ಬಾಕಿ ಇದ್ದವು, ಆಗಲೇ ಒಂದಿಷ್ಟು ಚಿಂತಕರು ಯಾದಗಿರಿ ಜಿಲ್ಲೆಗೆ ಲಗ್ಗೆ ಇಟ್ಟು ಸುದ್ದಿಗೋಷ್ಠಿ ನಡೆಸಿ, ಯಾವುದೇ ಕಾರಣಕ್ಕೂ ಈ ಸಮಾವೇಶ ನಡೆಯಬಾರದು. ಇದು ರದ್ದಾಗಬೇಕೆಂದು ಡಿಸಿ, ಎಸ್​ಪಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಅಷ್ಟೇ ಅಲ್ಲದೆ ಶಹಾಪುರದಲ್ಲಿ ಮೇ 18ಕ್ಕಿಂತ ಮೊದಲೇ ಒಂದು ಸಮಾವೇಶ ಮಾಡಲು ತೀರ್ಮಾನಿಸಿ ದಿನಾಂಕ ನಿಗದಿ ಮಾಡಿ ಮೇ 15ರಂದು ಸಮಾವೇಶ ಮಾಡಿಯೇ ಬಿಟ್ಟರು. ಈ ನಡುವೆ ಹಿಂದೂ ಪದದ ಹೆಸರಲ್ಲಿ ಬಸವಾದಿ ಶಿವಶರಣರ ಸಮಾವೇಶ ಮಾಡುವುದು ಒಪ್ಪುವುದಿಲ್ಲ, ಇದರ ಹಿಂದೆ ಆರ್​ಎಸ್​ಎಸ್​ ಹುನ್ನಾರ ಅಡಗಿದೆ. ಬಸವಣ್ಣನವರ ನಿಜವಾದ ಅನುಯಾಯಿಗಳು ಹಿಂದೂ ಹೆಸರಲ್ಲಿ ಸಮಾವೇಶಗಳು ಮಾಡುವುದಿಲ್ಲ ಹೀಗೆ ತರೆವಾರಿ ಮಾತುಗಳು ಪುಂಕಾನುಪುಂಕವಾಗಿ ಜಿಲ್ಲೆಯಾದ್ಯಂತ ರಾರಾಜಿಸಿದವು.
ಇದು ಮೇ 18ರಂದು ಮಾಡುವ ಸಮಾವೇಶದವರಿಗೆ ಒಂದು ನಮೂನಿಯಲ್ಲಿ ಭಾರಿ ಬೂಸ್ಟ್​ ಸಿಕ್ಕಂತಾಯಿತೆಂಬ ಮಾತು ಈಗ ಕೇಳಿ ಬರುತ್ತಿವೆ. ಇಷ್ಟು ಪರಿ ವಿರೋಧ ಮಾಡುತ್ತಿದ್ದಾರೆ ಎಂದರೆ ಆ ಸಮಾವೇಶದಲ್ಲಿ ಅಂತಹದ್ದು ಏನೈತಿ ಎಂದು ಸ್ವಯಂಪ್ರೇರಿತರಾಗಿ ಜನ ಮುಗಿಬಿದ್ದು ಬಂದು ಯಶಸ್ಸಿಗೆ ಕಾರಣರಾದರೆಂಬ ಮಾತುಗಳ ಜತೆಗೆ ಇದಕ್ಕೆ ವಿರೋಧಿಗಳೇ ಪರೋಕ್ಷವಾಗಿ ಒಂದು ನಮೂನಿಯಲ್ಲಿ ಕಾರಣರೂ ಎಂಬ ಚರ್ಚೆ ನಡೆದಿದೆ.
ಏನೇ ಆದರೂ ವಿರೋಧಿಗಳ ಮಾತುಗಳು ಇದನ್ನೇ ಸವಾಲ್​ ಆಗಿ ಸ್ವೀಕರಿಸಿದ ಸೂಗೂರೇಶ್ವರ ಶಿವಾಚಾರ್ಯರ ನೇತೃತ್ವದ ತಂಡ ಅವರಿಗೆ ಯಾವುದೇ ತರಹದ ಉತ್ತರ ನೀಡದೆ ಭರ್ಜರಿ ಸಮಾವೇಶ ಮಾಡಿದ್ದು ಮಾತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.
ನಾಲ್ಕು ತರಹದ ಬಸವಾಭಿಮಾನಿಗಳು
ಸಮಾವೇಶದಲ್ಲಿ ಮಾತನಾಡಿದ ಕನ್ಹೇರಿ ಶ್ರೀಗಳು ಒಟ್ಟು ನಾಲ್ಕು ತರಹದ ಬಸವಾಭಿಮಾನಿಗಳಿದ್ದು, ಹೊಟ್ಟೆಪಾಡಿಗಾಗಿ, ಪುಕ್ಕಟ್ಟೆ ಪ್ರಚಾರಕ್ಕಾಗಿ, ಅಸ್ತಿತ್ವ ಉಳಿಸಿಕೊಳ್ಳುವುದಾಗಿ ಮತ್ತು ನಿಜವಾಗಿ ಬಸವತತ್ವ ಆಚರಣೆ ಮಾಡಿ ಪ್ರಚಾರ ಬಯಸದೇ ಇರುವವರು. ಹೀಗೆ ನಾಲ್ಕು ಭಾಗವಾಗಿ ವಿಂಗಡನೆ ಮಾಡಿ ಅವರು ವಿಶ್ಲೇಷಿಸಿದರು. ಈ ಮಾತುಗಳು ಪ್ರಜ್ಞಾವಂತರನ್ನು ಎಡೆಬಿಡದೇ ಕಾಡುತ್ತಿವೆ. ಏನಂತ ಅಂದರೆ ಯಾರು ಯಾವ ಗುಂಪಿಗೆ ಸೇರಿದ ಬಸವಾಭಿಮಾನಿಗಳು ಎಂದು ?!.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net