ಭ್ರೂಣ ಲಿಂಗ ಪತ್ತೆ ಮಾಹಿತಿ ನೀಡಿದವರಿಗೆ ಲಕ್ಷ ರೂ.ಬಹುಮಾನ : ದಿನೇಶ್ ಗುಂಡೂರಾವ್

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • * ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ
  • * ಭ್ರೂಣ ಹತ್ಯೆ ತಡೆಗೆ ಕಠಿಣ ಕ್ರಮ
ಬೆಂಗಳೂರು: ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡಿದವರಿಗೆ ನೀಡುವ ಬಹುಮಾನದ ಮೊತ್ತವನ್ನು 50 ಸಾವಿರದಿಂದ 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಇಲಾಖೆಯು ನಗರದ ಆರೋಗ್ಯ ಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‌ಡಿಟಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ, ನಡೆಸಲಾಗಿದ್ದ ಗುಪ್ತ ಕಾರ್ಯಾಚರಣೆಯಲ್ಲಿ ಮಾಹಿತಿ ನೀಡಿದವರಿಗೆ ಈ ಬಹುಮಾನ ನೀಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಗಳನ್ನು ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಭ್ರೂಣ ಹತ್ಯೆ ತಡೆಗೆ ಸಹಕರಿಸಬೇಕು. ಇದರಿಂದ ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಲಿಂಗಾನುಪಾತ ಸರಿಯಾಗಲಿದೆ ಎಂದರು.
ಹೆಣ್ಣು ಮಕ್ಕಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹೆಣ್ಣುಮಕ್ಕಳ ಆರೋಗ್ಯ ಕಾಪಾಡಲು ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ರಕ್ತ ಹೀನತೆ ಹೋಗಲಾಡಿಸಲು ಅನಿಮೀಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ, ಶುಚಿ ಯೋಜನೆ, ಜನನಿ ಸುರಕ್ಷಾ ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಶತಮಾನಗಳಿಂದಲೂ ಇರುವ ಹೆಣ್ಣು-ಗಂಡಿನ ನಡುವಿನ ವ್ಯತ್ಯಾಸದಿಂದಾಗಿ ಹೆಣ್ಣು ಮಕ್ಕಳಿಗೆ ಸರಿಸಮಾನ ಅವಕಾಶ, ಗೌರವಗಳು ಸಮಾಜದಲ್ಲಿ ದೊರೆತಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಸೇರಿ ವಿವಿಧೆಡೆ ಶೇ. 50 ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನಷ್ಟು ಬದಲಾವಣೆಗೆ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಇಲಾಖೆ ಆಯುಕ್ತ ಗುರುದತ್ತ ಹೆಗಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಅವಿನಾಶ್ ಮೆನನ್ ರಾಜೇಂದ್ರನ್, ಇಲಾಖೆ ನಿರ್ದೇಶಕ ಡಾ. ಕೆ. ವಸಂತ್ ಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net