

ಬೆಂಗಳೂರು: ರಾಜ್ಯದ ಪಡಿತರ ಕಾರ್ಡ್ದಾರರಿಗೆ ಆಹಾರ ಇಲಾಖೆ ಬೆರಳಚ್ಚು (ಬಯೋಮೆಟ್ರಿಕ್ ) ವಿನಾಯಿತಿ ಕೊಟ್ಟಿದೆ. ಇದರ ಅನ್ವಯ 2 ಬಾರಿ ಬದಲು ಒಂದೇ ಬಾರಿ ಪಡಿತರ ಚೀಟಿದಾರರ ಬೆರಳಚ್ಚು ಪಡೆದು 2 ತಿಂಗಳ ಅಕ್ಕಿ ವಿತರಿಸುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಿದೆ.
ಸರ್ವರ್ ಸಮಸ್ಯೆಯಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ತೆಗೆದುಕೊಳ್ಳಲು ಕಾರ್ಡ್ದಾರರು ಪಡಿಪಾಟಲು ಪಡುತ್ತಿರುವ ಬಗ್ಗೆ ವಿಜಯವಾಣಿ ಮೇ 26ರ ಮುಖಪುಟದಲ್ಲಿ ‘ಪಡಿತರ ಪಡೆಯಲು ಪರದಾಟ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ‘ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ’ ಯೋಜನೆಯಡಿ 2 ತಿಂಗಳ ಪಡಿತರವನ್ನು ಕಳೆದ ಮೇನಲ್ಲಿ ಒಂದೇ ಬಾರಿ ಕಾರ್ಡ್ದಾರರಿಗೆ ವಿತರಿಸಲಾಗಿತ್ತು.
ಈ ರೇಷನ್ ಪಡೆಯಲು ಕಾರ್ಡ್ದಾರರು 2 ಬಾರಿ ಬೆರಳಚ್ಚು ಕೊಡಬೇಕಿತ್ತು. ಈ ಸಂದರ್ಭದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನೂರಾರು ಕಾರ್ಡ್ದಾರರು ಖಾಲಿ ಚೀಲ ಕೈಯಲ್ಲಿ ಹಿಡಿದುಕೊಂಡು ನ್ಯಾಯಬೆಲೆ ಅಂಗಡಿಗಳ ಮುಂಭಾಗ ಬಯೋಮೆಟ್ರಿಕ್ ನೀಡಲು ಸರದಿ ಸಾಲಲ್ಲಿ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವೇಳೆ 7-8 ಕಾರ್ಡ್ದಾರರ ಬಯೋ ಮಾತ್ರ ತೆಗೆದುಕೊಳ್ಳಲಾಗುತ್ತಿತ್ತು. ಸರ್ವರ್ ಸಮಸ್ಯೆ ಬಗೆಹರಿಸಲು ಇಲಾಖೆ ಹೆಣಗಾಡಿತ್ತು. ಸಾಕಷ್ಟು ಜಿಲ್ಲೆಗಳಲ್ಲಿ ಶೇ.100 ಪಡಿತರ ವಿತರಣೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ಬಾರಿ ಅಂತಹ ಸಮಸ್ಯೆ ಎದುರಾಗದಂತೆ ಇಲಾಖೆ ಕ್ರಮ ತೆಗೆದುಕೊಂಡಿದೆ.
ಕೇಂದ್ರದ ಪಾಲಿನ 2 ತಿಂಗಳ ಅಕ್ಕಿಯನ್ನು ಒಂದೇ ಬಾರಿಗೆ ವಿತರಿಸಿದ್ದ ಪರಿಣಾಮ ರಾಜ್ಯದ ಪಾಲಿನ ಅಕ್ಕಿಯನ್ನು ಕಾರ್ಡ್ದಾರರಿಗೆ ನೀಡಲಾಗಿರಲಿಲ್ಲ. ಇದೀಗ ಮೇ, ಜೂನ್ ತಿಂಗಳ ಅನ್ನಭಾಗ್ಯದ ಅಕ್ಕಿಯನ್ನು ಒಂದೇ ಬಾರಿ ಹಂಚಿಕೆ ಮಾಡಲಾಗುತ್ತಿದೆ. ಜೂನ್ 5ರಿಂದ ಪ್ರತಿನಿತ್ಯ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಪಡಿತರ ವಿತರಿಸಲು ಆಹಾರ ಇಲಾಖೆಗೆ ಸೂಚನೆ ಕೊಟ್ಟಿದೆ. ಅಲ್ಲದೆ, ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಹೊಸದಾಗಿ ಉಪಕರಣ, ಬ್ರಾಡ್ಬ್ಯಾಂಡ್ ಕನೆಕ್ಷನ್ ಪಡೆಯುವಂತೆ ಇಲಾಖೆ ಸೂಚಿಸಿದೆ.