ಟೇಕಲ್: ಸಾರ್ವಜನಿಕರ ಸಮಸ್ಯೆ ಹಾಗೂ ಇಲಾಖೆವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ‘ತಾಲೂಕು ಆಡಳಿತ, ಶಾಸಕರ ನಡೆ ಗ್ರಾಮದ ಕಡೆ’ ಎಂಬ ಶೀರ್ಷಿಕೆಯಡಿ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಏರ್ಪಡಿಸಿ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. spot solutions
ಮಾಲೂರು ತಾಲೂಕು ನೂಟುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರಲಕ್ಕಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಸಕರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾನ್ಯ ಜನರಿಗೂ ಇಂತಹ ಕಾರ್ಯಕ್ರಮಗಳಿಂದ ನ್ಯಾಯ ದೊರಕುತ್ತದೆ. ತಾಲೂಕಿನ 32 ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿಯೇ ಲಭ್ಯವಿದ್ದು ಜನರಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗುತ್ತದೆ. ತಾಲೂಕು ಕಚೇರಿಗಳಿಗೆ ಜನರು ಅಲೆಯುದನ್ನು ತಪ್ಪಿಸಲು ಹಾಗೂ ಮಧ್ಯವರ್ತಿಗಳಿಂದ ಜನರನ್ನು ದೂರವಿಡಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇಲ್ಲಿ ಯಾವುದೇ ರಾಜಕೀಯ ಇಲ್ಲದೆ ಎಲ್ಲವೂ ಸರ್ಕಾರಿ ಅಧಿಕಾರಿಗಳಿಂದಲೇ ಕೆಲಸ ಆಗುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮಾಲೂರು ತಾಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲೂ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಭಾಗಿಯಾಗಿ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯ ಯಶಸ್ವಿಯಾದರೆ ನಾವು ಮಾದರಿ ಆಗುತ್ತೇವೆ ಎಂದು ಹೇಳಿದರು.
ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ಕಂದಾಯ ಇಲಾಖೆಯಿಂದ ಸಿಗುವ ಎಲ್ಲ ಮನವಿಗಳಿಗೂ ಪರಿಹಾರ ಕಲ್ಪಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಅಹವಾಲುಗಳನ್ನು ಅರ್ಜಿ ಮೂಲಕ ನೀಡಬೇಕು ಎಂದು ತಿಳಿಸಿದರು.
ನೂಟುವೇ ಗ್ರಾಮ ಪಂಚಾಯತಿಯಿಂದ ಶ್ರೀ ಶಕ್ತಿ ಸಂಘಗಳಿಗೆ ಸಾಲದ ಮೊತ್ತದ ಚೆಕ್ ಅನ್ನು ಶಾಸಕ ಕೆ.ವೈ.ನಂಜೇಗೌಡರು ವಿತರಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ. ಬಿಇಒ ಕೆಂಪಯ್ಯ, ತಾಲೂಕು ಆರೋಗ್ಯ ಅಧಿಕಾರಿ ರಮೇಶ್ ಬಾಬು, ಸ್ಥಳೀಯ ವೈದ್ಯಾಧಿಕಾರಿ ರಾಜೇಶ್, ಪಿಡಿಒ ಗೇಮು ಚೌವ್ಹಾಣ್ ಇದ್ದರು.