ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ತಂಡ ಭೇಟಿ, ನೀಡಿ ಪರಿಶೀಲಿಸಿದರು. ಮಹಾದೇವಪ್ಪ ಏವೂರ, ಎಸ್.ಆರ್. ಗದ್ಯಾಳ, ಪಂಡಿತ ಕೊಡಹೊನ್ನ, ಉಮೇಶ್ ಕಾಂಬಳೆ ಇತರರಿದ್ದರು.
ಇಂಡಿ : ತಾಲೂಕಿನ ಹೊರ್ತಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ತಂಡ ಭೇಟಿ, ನೀಡಿ ಪರಿಶೀಲಿಸಿದರು.
‘ವಿಜಯವಾಣಿ’ ದಿನಪತ್ರಿಕೆಯಲ್ಲಿ ಜೂ. 18ರಂದು ‘ಬಹಿರ್ದೆಸೆಗೆ ಬಯಲೇ ಗತಿ’ ಶಿರೋನಾಮೆಯಡಿ ಪ್ರಕಟವಾದ ವರದಿ ಆಧರಿಸಿ ವಸತಿ ನಿಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ವಸತಿ ನಿಲಯ ಮತ್ತು ಶಾಲೆಯಲ್ಲಿ ಏನಾದರೂ ಸಮಸ್ಯೆ ಇದೆಯೇ? ಎಂದು ಕೇಳಿದಾಗ ಅಲ್ಲಿನ ವಿದ್ಯಾರ್ಥಿಗಳು ನಮಗೆ ನೀರಿನ ಸಮಸ್ಯೆ ಬಿಟ್ಟರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ, ನೀರು ಇಲ್ಲದ ಕಾರಣ ನಾವು ಬಹಿರ್ದೆಸೆಗೆ ಬಯಲಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಬೆಳಕಾದರೆ ಎಲ್ಲಾ ಕಡೆ ಜನರು ತಿರುಗಾಡುತ್ತಾರೆ. ಹೀಗಾಗಿ ಬಹಿರ್ದೆಸೆಗೆ ಹೋಗಲು ಬಹಳ ತೊಂದರೆಯಾಗುತ್ತದೆ. ನಮಗೆ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.
ಸಮಸ್ಯೆ ಪರಿಹರಿಸುವುದಾಗಿ ಕಂದಾಯ ಉಪ ವಿಭಾಗಾಧಿಕಾರಿಗಳು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಅಧಿಕಾರಿಗಳ ತಂಡ ಸೇರಿ ಮಕ್ಕಳೊಂದಿಗೆ ಊಟಮಾಡಿ ಅಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಪ್ರತಿ ಎರಡು ದಿನಕ್ಕೊಮ್ಮೆ ಶಾಲೆಯ ಟ್ಯಾಂಕ್ (ಸಂಪ್) ತುಂಬುವವರೆಗೂ ನೀರು ಬಿಡಲು ಸೂಚಿಸಿದರು.
"
ಶಾಲೆಗೆ ಭೇಟಿ ನೀಡಿದ್ದೇವೆ ನೀರಿನ ಸಮಸ್ಯೆ ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಕೊಳುರಗಿ ಕೆರೆಯಿಂದ ನೀರು ಪೂರೈಸಲು ಸಾಧ್ಯವಾಗುತ್ತದೆಯೇ ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಚಿದಾನಂದ ಗುರುಸ್ವಾಮಿ,ಕಂದಾಯ ಉಪ ವಿಭಾಗಾಧಿಕಾರಿಗಳು ಇಂಡಿ.
ಬಾವಿ ತೋಡಿದರೆ ಸಮಸ್ಯೆಗೆ ಪರಿಹಾರ
ಇಲ್ಲಿ ಆರು ಬೋರ್‌ವೆಲ್ ಕೊರೆಸಿದರೂ ನೀರು ಲಭ್ಯವಿಲ್ಲ. ಕೊಳುರುಗಿ ಕೆರೆ ಅಥವಾ ಕಪನಿಂಬರಗಿ ಕೆರೆಯಿಂದ ಪೈಪ್‌ಲೈನ್ ಮಾಡಿ ಬಾವಿ ತೋಡಿದರೆ ಮಾತ್ರ ಇಲ್ಲಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಈ ಕುರಿತು ಮೇಲಾಧಿಕಾರಿಗಳು ಹಾಗೂ ಶಾಸಕರೊಂದಿಗೆ ಚರ್ಚಿಸುತ್ತೇವೆ. ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾದೇವಪ್ಪ ಏವೂರ, ಅಧಿಕಾರಿಗಳಾದ ಬಿಸಿಎಂ ಇಲಾಖೆ ಅಧಿಕಾರಿ ಎಸ್.ಆರ್. ಗದ್ಯಾಳ, ಕಂದಾಯ ನಿರೀಕ್ಷಕ ಪಂಡಿತ ಕೊಡಹೊನ್ನ, ಮುಖ್ಯ ಶಿಕ್ಷಕ ಉಮೇಶ ಕಾಂಬಳೆ ಇತರರಿದ್ದರು.