ಸರ್ಕಾರಿ ಜಮೀನು ಒತ್ತುವರಿಗೆ ಅಧಿಕಾರಿಗಳ ಕುಮ್ಮಕ್ಕು

Officials abet encroachment of government land.
Officials abet encroachment of government land.
Published on
ಗುಡಿಬಂಡೆ : ವರ್ಲಕೊಂಡ ಗ್ರಾಮದ ಸರ್ವೆ ನಂ. 8/9ರಲ್ಲಿರುವ 19 ಗುಂಟೆ ಸರ್ಕಾರಿ ಬಂಡೆ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕಲ್ಲು ಗಣಿಗಾರಿಕೆ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆಯಿಂದ ತಾಲೂಕು ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎಸ್​. ಅರುಣ್​ ಕುಮಾರ್​ ಮಾತನಾಡಿ, ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಕ್ರಮವಹಿಸಲು ತಹಸೀಲ್ದಾರ್​ಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ತಹಸೀಲ್ದಾರ್​, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಅಧಿಕಾರಿಗಳಸಂಪೂರ್ಣ ಸೇವಾ ಅವಧಿಯ ಆದಾಯದ ಮೂಲ, ಬ್ಯಾಂಕ್​ ಖಾತೆಗಳ ವಹಿವಾಟು, ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಬಗ್ಗೆ ಲೋಕಾಯುಕ್ತ ಇಲಾಖೆಯಿಂದ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಉಪಾಧ್ಯಕ್ಷ ಪುಟ್ಟರಂಗಯ್ಯ ಮಾತನಾಡಿ, ಸರ್ಕಾರಿ ಜಮೀನು ಗುಳುಂ ಮಾಡುತ್ತಿರುವ ಪ್ರಭಾವಿಗಳ ಪರವಾಗಿ ತಹಸೀಲ್ದಾರ್​ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದಾರೆ. ಕಂದಾಯ ಇಲಾಖೆಅಧಿಕಾರಿಗಳು ಸರ್ಕಾರಿ ಆಸ್ತಿ ಉಳಿಸುವ ಕೆಲಸ ಮಾಡಬೇಕು. ಆದರೆ, ಗುಡಿಬಂಡೆ ತಾಲೂಕು ಕಚೇರಿ ಅಧಿಕಾರಿಗಳು ಸರ್ಕಾರಿ ಆಸ್ತಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಭಾವಿಗಳ ಹೆಸರಿಗೆ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ತಕ್ಷಣ ತನಿಖೆ ನಡೆಸಬೇಕು ಎಂದರು.
ಆರಕ್ಷಕ ಉಪನಿರೀಕ್ಷಕ ಮುನಿಕೃಷ್ಣ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಆರಕ್ಷಕ ಉಪನಿರೀಕ್ಷಕ ಮುನಿಕೃಷ್ಣ, ಮನವಿಯನ್ನು ಜಿಲ್ಲಾಧಿಕಾರಿಯವರಿಗೆ ರವಾನಿಸಿ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ, ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net