ಇದು ನಮ್ಮ ಪಾಲ್, ನಮ್ಮ ಮಕ್ಕಳ ಪಾಲ್, ನಮ್ಮ ಹಿರಿಯರ ಪಾಲ್.. ಎಂಬ ಭಕ್ತಿಭಾವದೊಂದಿಗೆ ಮಹಿಳೆಯರು ಸೋಮವಾರ ನಾಗರಪಂಚಮಿ ಆಚರಿಸಿದರು. ನಗರದ ಸೇರಿ ರಂಗಂಪೇಟೆ- ತಿಮ್ಮಾಪುರದಲ್ಲಿ ಹುತ್ತ ಮತ್ತು ನಾಗಮೂರ್ತಿಗಳಿಗೆ ಹಾಲೆರೆಯುವ ಮೂಲಕ ನಾಗದೇವರಿಗೆ ಪೂಜೆ ಸಲ್ಲಿಸಿ, ಸಂಭ್ರಮಿಸಿದರು.
ನಗರದ ರಂಗಂಪೇಟೆ-ತಿಮ್ಮಾಪುರ ಭಾಗದಲ್ಲಿ ಮಹಿಳೆಯರು ಸೋಮವಾರ ಬೆಳಗ್ಗೆಯಿಂದಲೇ ವಿವಿಧ ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿದರು. ಮಧ್ಯಾಹ್ನ ದೇವಸ್ಥಾನಗಳಿಗೆ ತೆರಳಿ ನೈವೇದ್ಯ ಸಮರ್ಪಿಸಿ ಮಕ್ಕಳೊಂದಿಗೆ ನಾಗಮೂರ್ತಿಗಳಿಗೆ ಹಾಲಿನ ಅಭಿಷೇಕ ಮಾಡಿದರು. ಕೊಬ್ಬರಿ ಚಿಪ್ಪಿನ ಬಟ್ಟಲಿನಲ್ಲಿ ಹಾಲು ತೆಗೆದುಕೊಂಡು ನಾಗಮೂರ್ತಿಗೆ ಅರ್ಪಿಸಿ, ಕುಟುಂಬದ ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.
ರಂಗಂಪೇಟೆಯ ಶ್ರೀ ಶರಣಬಸವೇಶ್ವರ ದೇವಸ್ಥಾನ ಮತ್ತು ನಗರದ ದೇವರಬಾವಿ ಸಮೀಪದ ನಾಗರಕಟ್ಟೆಯಲ್ಲಿ ಹಾಲೆರೆಯಲು ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪೂಜೆ ಸಲ್ಲಿಸಿದ ಬಳಿಕ ಮನೆಗಳಿಗೆ ಮರಳಿದ ಕುಟುಂಬಗಳು ಒಟ್ಟಾಗಿ ಹಬ್ಬದೂಟ ಸವಿದು ಸಂಭ್ರಮಿಸಿದರು.
ನಾಗರಪಂಚಮಿ ಅಂಗವಾಗಿ ಗ್ರಾಮೀಣ ಸಂಸ್ಕೃತಿಯ ಸೊಬಗನ್ನೂ ಕಾಣಬಹುದಾಯಿತು. ಮಹಿಳೆಯರು ಮತ್ತು ಮಕ್ಕಳು ಕೊಬ್ಬರ ಆಟ, ಜೋಕಾಲಿ ಸೇರಿದಂತೆ ವಿವಿಧ ದೇಶಿ ಆಟಗಳಲ್ಲಿ ಭಾಗವಹಿಸಿ ಖುಷಿಪಟ್ಟರು. ಯುವಕರು ಲಿಂಬೆಹಣ್ಣು ಮತ್ತು ನಾಣ್ಯ ಎಸೆಯುವ ಆಟ, ಓಟದ ಸ್ಪರ್ಧೆ ಹಾಗೂ ಕೆಲವಡೆ ಕಸರತ್ತಿನ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಗುಂಡುಕಲ್ಲು ಎತ್ತುವಂತಹ ಸಾಂಪ್ರದಾಯಿಕ ಕ್ರೀಡೆಗಳು ಗ್ರಾಮೀಣ ಬದುಕಿನ ಸೊಗಡನ್ನು ಬಿಂಬಿಸಿದವು.
ಒಟ್ಟಾರೆ ಬರದ ಪರಿಸ್ಥಿತಿ ಹಾಗೂ ಬೆಲೆ ಏರಿಕೆಯ ಬಿಸಿಯ ನಡುವೆಯೂ ಜನರು ನಾಗರಪಂಚಮಿ ಸಂಭ್ರಮವನ್ನು ಕೈಬಿಡಲಿಲ್ಲ. ಎಷ್ಟೇ ಆರ್ಥಿಕ ಸಂಕಷ್ಟಗಳಿದ್ದರೂ ತಲೆತಲಾಂತರಗಳಿAದ ನಡೆದುಕೊಂಡು ಬಂದಿರುವ ಸಾಂಸ್ಕೃತಿಕ ಪರಂಪರೆ ಮತ್ತು ಆಚರಣೆಗಳನ್ನು ಮುಂದುವರಿಸಿದರು.
ನಾಗದೇವರಿಗೆ ಹಾಲೆರೆಯುವ ಆಚರಣೆಯು ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿ ಮತ್ತು ಜೀವಜಗತ್ತಿನೊಂದಿಗೆ ಮಾನವನ ಬಾಂಧವ್ಯವನ್ನು ಪ್ರತಿಬಿಂಬಿಸುವ ಪರಂಪರೆಯಾಗಿ ಉಳಿದಿದೆ. ಹೀಗಾಗಿ ತಾಲೂಕಿನಲ್ಲಿ ಬೆಲ್ಲದ ಹಾಲು ಮತ್ತು ಬಿಳಿ ಹಾಲು ಎಂದು ನಾಗರಪಂಚಮಿಯನ್ನು ಎರಡು ದಿನಗಳ ಕಾಲ ಭಕ್ತಿ, ಸಂಭ್ರಮ ಮತ್ತು ಗ್ರಾಮೀಣ ಸಾಂಸ್ಕೃತಿಕ ಸೊಗಡಿನೊಂದಿಗೆ ಕಳೆಗಟ್ಟಿತ್ತು.