ಸಾಧನೆಯ ದಾರಿಯಲ್ಲಿ ಅಡೆತಡೆ ಸಾಮಾನ್ಯ

Obstacles on the path to success are common.
Obstacles on the path to success are common.
Published on
ಕೊರಟಗೆರೆ : ಸಾಧನೆಯ ದಾರಿಯಲ್ಲಿ ಹೆಜ್ಜೆ ಇಡುವವರಿಗೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಿ ನಿಂತಾಗ ಮಾತ್ರ ಯಶಸ್ಸಿನ ಶಿಖರ ತಲುಪಲು ಸಾಧ್ಯ ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಸಿದ್ಧರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದಲ್ಲಿ 230ನೇ ಬೆಳದಿಂಗಳ ಕೂಟದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಧರ್ಮ ಹಾಗೂ ಜನಜಾಗೃತಿ ಸಮಾರಂಭದಲ್ಲಿ ಅಂಧ ಮಹಿಳೆಯರ ಟಿ.20 ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ಎನ್.ಆರ್.ಕಾವ್ಯಾ ಅವರನ್ನು ಸನ್ಮಾನಿಸಿ ಮಾತನಾಡಿ, ಬಡ ಕುಟುಂಬದಲ್ಲಿ ಜನಿಸಿ, ಅಂಗವೈಕಲ್ಯವನ್ನು ಹೊಂದಿದ್ದರೂ ಸಾಧನೆ ಮಾಡಲೇಬೇಕೆಂಬ ದೃಢ ಸಂಕಲ್ಪದಿಂದ ಯಶಸ್ಸು ಗಳಿಸಿರುವ ಕಾವ್ಯಾ ಅವರು ಅನೇಕ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಇಂತಹ ಸಾಧಕಿಗೆ ಶ್ರೀಮಠ ಹಾಗೂ ಮಠದ ಸದ್ಭಕ್ತರಿಂದ ಅಗತ್ಯವಿರುವ ಎಲ್ಲ ರೀತಿಯ ಸಹಾಯ ನೀಡಲಾಗುವುದು ಎಂದು ಸ್ವಾಮೀಜಿ ಭರವಸೆ ನೀಡಿದರು.
ಹುಕ್ಕೇರಿಯ ಗುರುಶಾಂತೇಶ್ವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಧರ್ಮವು ಮಾನವನ ಬದುಕಿಗೆ ಆಸರೆಯಾಗಿದ್ದು, ಧರ್ಮವೆಂದರೆ ಕೇವಲ ಮಾತಿನಲ್ಲಿ ಹೇಳುವುದಲ್ಲ, ಬದುಕಿನಲ್ಲಿ ನಡೆದು ತೋರಿಸುವುದಾಗಿದೆ. ಧರ್ಮದ ಮಾರ್ಗದಲ್ಲಿ ನಡೆಯುವ ವ್ಯಕ್ತಿಯನ್ನು ಯಾರಿಂದಲೂ ಮಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್.ಆರ್.ಕಾವ್ಯಾ ಬಾಲ್ಯದಿಂದ ಅನುಭವಿಸಿದ ಬಡತನ, ಅಂಗವೈಕಲ್ಯದಿಂದಾಗಿ ಎದುರಿಸಿದ ಸಮಾಜದ ಚುಚ್ಚು ಮಾತುಗಳು ಹಾಗೂ ಸವಾಲುಗಳ ನಡುವೆಯೂ ಹಿರಿಯರ, ಹಿತೈಷಿಗಳ ಪ್ರೇರಣೆಯ ಮಾತುಗಳು ಮತ್ತು ಸಮರ್ಥಂ ಸಂಸ್ಥೆಯ ಸಹಕಾರವೇ ಸಾಧನೆಗೆ ಕಾರಣವಾಗಿದೆ ಎಂದು ಸ್ಮರಿಸಿದರು. ಶ್ರೀ ಸರ್ಪಭೂಷಣ ಸ್ವಾಮೀಜಿ, ಗೌ.ರಾ.ರಾಮಮೂರ್ತಿ, ಜೋನಿಗರಹಳ್ಳಿ ಸವಿತಾ, ಮಮತಾ, ಶ್ರೀನಿವಾಸ್ ಹಾಗೂ ಭಕ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net