ಗೆಜೆಟ್​ನಲ್ಲಿ ಪ್ರಕಟಿಸದೆ ಅಧಿಸೂಚನೆ ಜಾರಿ ಸಾಧ್ಯವಿಲ್ಲ ಎಂದ ಹೈಕೋರ್ಟ್​| ಪತಂಜಲಿಗೆ 3.40 ಕೋಟಿ ಮರುಪಾವತಿ​| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ಆಮದು ಸುಂಕ ಪಾವತಿಸಿಕೊಂಡಿದ್ದ ಹಣಕಾಸು ಇಲಾಖೆ
  • ಕ್ರಮ ಪ್ರಶ್ನಿಸಿ ಪತಂಜಲಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್​
ಶ್ರವಣ್​ ನೀರಬಿದಿರೆ ಬೆಂಗಳೂರು 
ಕೇಂದ್ರ ಸರ್ಕಾರ 1962ರ ಕಸ್ಟಮ್ಸ್​ ಕಾಯ್ದೆಯ ಸೆಕ್ಷನ್​ 25(4)ಕ್ಕೆ ಮಾಡಿರುವ ತಿದ್ದುಪಡಿ ಅಸಂವಿಧಾನಿಕ ಎಂದು ಹೈಕೋರ್ಟ್ (high court)​ ಘೋಷಿಸಿದೆ. ಗೆಜೆಟ್​ನಲ್ಲಿ ಅಧಿಕೃತವಾಗಿ ಪ್ರಕಟಿಸದೆ ಅಧಿಸೂಚನೆ ಜಾರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಸೆಕ್ಷನ್​ ತಿದ್ದುಪಡಿ ಆಧಾರದಲ್ಲಿ ಪತಂಜಲಿ ಫುಡ್ಸ್​ ಲಿಮಿಟೆಡ್​ನಿಂದ ಸಂಗ್ರಹಿಸಿರುವ 3.40 ಕೋಟಿ ರೂ. ಹೆಚ್ಚುವರಿ ಆಮದು ಸುಂಕವನ್ನು ಮರುಪಾವತಿಸುವಂತೆ ಕೇಂದ್ರ ಹಣಕಾಸು ಇಲಾಖೆಗೆ ನಿರ್ದೇಶನ ನೀಡಿದೆ. 
ಹೆಚ್ಚುವರಿಯಾಗಿ ಸಂಗ್ರಹಿಸಿದ್ದ ಆಮದು ಶುಲ್ಕವನ್ನು ಮರುಪಾವತಿಸಲು ಆದೇಶಿಸುವಂತೆ ಕೋರಿ ಪತಂಜಲಿ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್​ ಮಾನ್ಯ ಮಾಡಿದೆ. ಇದೇ ವಿಚಾರದಲ್ಲಿ ಆಂಧ್ರಪ್ರದೇಶ ಹೈಕೋರ್ಟ್​ ನೀಡಿರುವ ತೀರ್ಪನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ಹೈಕೋರ್ಟ್​ ತೀರ್ಪು ನೀಡಿದೆ. 
2016ರ ಹಣಕಾಸು ಕಾಯ್ದೆ ಮೂಲಕ ಕಸ್ಟಮ್ಸ್​ ಕಾಯ್ದೆಯ ಸೆಕ್ಷನ್​ 25(4)ಕ್ಕೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯು ಕಾಯ್ದೆಯ ಇತರ ಸೆಕ್ಷನ್​ಗಳೊಂದಿಗೆ ಸಂರ್ಷಕ್ಕೆ ಕಾರಣವಾಗುತ್ತದೆ. ಇದೊಂದು ಸರ್ಕಾರದ ನಿರಂಕುಶ, ಕಾನೂನುಬಾಹಿರ ಮತ್ತು ಅಧಿಕಾರ ವ್ಯಾಪ್ತಿ ಮೀರಿದ ಕ್ರಮ ಎಂದು ಆಂಧ್ರಪ್ರದೇಶದ ಹೈಕೋರ್ಟ್​ ತೀರ್ಪು ನೀಡಿತ್ತು. 
ಸುಂಕದ ಮೇಲೆ ನೀಡುವ ಯಾವುದೇ ವಿನಾಯಿತಿ ಅಥವಾ ಶುಲ್ಕ ಹೆಚ್ಚಳ ಕುರಿತ ಅಧಿಸೂಚನೆಯನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್​ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಕಸ್ಟಮ್ಸ್​ ಕಾಯ್ದೆಯ 25(1) ಮತ್ತು (2ಎ) ಸೆಕ್ಷನ್​ ಹೇಳುತ್ತದೆ. ಕೇಂದ್ರ ಸರ್ಕಾರದ ಅಧಿಸೂಚನೆಗಳು ಗೆಜೆಟ್​ನಲ್ಲಿ ಪ್ರಕಟವಾದ ನಂತರವೇ ಜಾರಿಗೆ ಬರುತ್ತದೆ ಎಂಬುದನ್ನು ಆ ಸೆಕ್ಷನ್​ಗಳು ಖಚಿತಪಡಿಸುತ್ತವೆ. ಆದರೆ, 25(4)ಕ್ಕೆ ಮಾಡಲಾದ ತಿದ್ದುಪಡಿಯು ಅದನ್ನು ಉಲ್ಲಂಘಿಸಲು ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ತಿದ್ದುಪಡಿ ಅಸಂವಿಧಾನಿಕ ಎಂದು ಆಂಧ್ರಪ್ರದೇಶ ಹೈಕೋರ್ಟ್​ ಹೇಳಿತ್ತು. ಪತಂಜಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್​.ಆರ್​.ಕೃಷ್ಣಕುಮಾರ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆಂಧ್ರಪ್ರದೇಶ ಹೈಕೋರ್ಟ್​ ನೀಡಿರುವ ತೀರ್ಪನ್ನೇ ಆಧರಿಸಿ ಅರ್ಜಿಯನ್ನು ಪುರಸ್ಕರಿಸಿದೆ. 

ದೇಶದ ನಿಯಮ ಜನರಿಗೆ ತಿಳಿದಿರಬೇಕು

 ಗೆಜೆಟ್​ನಲ್ಲಿ ಅಧಿಸೂಚನೆಗಳನ್ನು ಪ್ರಕಟಿಸದೆ, ನೇರವಾಗಿ ಜಾರಿಗೆ ತರುವುದರಿಂದ ನಾಗರಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆಮದು ಸರಕುಗಳ ಮೇಲೆ ಪಾವತಿಸಬೇಕಾದ ನಿಜವಾದ ಸುಂಕದ ದರ ತಿಳಿಯುವುದಿಲ್ಲ. ದೇಶದ ನಿಯಮಗಳು ಪ್ರಜೆಗಳಿಗೆ ತಿಳಿದಿರಬೇಕು. ಇಲ್ಲವಾದರೆ ಅನಗತ್ಯ ಗೊಂದಲ ಮತ್ತು ರ್ಷಣೆಗಳಿಗೆ ಕಾರಣವಾಗಿ, ನಾಗರಿಕರು ತಮಗೆ ತಿಳಿದಿಲ್ಲದ ಬದಲಾವಣೆಗಳಿಗೆ ಹೊಣೆಗಾರರಾಗುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಆಂಧ್ರ ಹೈಕೋರ್ಟ್​ ತೀರ್ಪಿನಲ್ಲಿ ಉಲ್ಲೇಖಿಸಿತ್ತು.

ಸೆಕ್ಷನ್​ 25(4)ಕ್ಕೆ ಮಾಡಲಾದ ತಿದ್ದುಪಡಿಯು ಗೆಜೆಟ್​ ಪ್ರಕಟಣೆ ಬದಲಾಗಿ ಇಲಾಖಾ ಆದೇಶವಾದ ದಿನದಿಂದಲೇ ಅಧಿಸೂಚನೆಗಳನ್ನು ಜಾರಿಗೆ ತರಲು ಅವಕಾಶ ನೀಡಿತ್ತು. ಸಾರ್ವಜನಿಕರಿಗೆ ಸರ್ಕಾರದ ನೀತಿಗಳ ಬದಲಾವಣೆಗಳನ್ನು ತಿಳಿಸಬೇಕು ಎಂಬ ಉದ್ದೇಶಕ್ಕೆ ಗೆಜೆಟ್​ ಪ್ರಕಟಣೆ ಮಾಡಲಾಗುತ್ತದೆ. ಅದನ್ನು ಬೈಪಾಸ್​ ಮಾಡುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪತಂಜಲಿ ಆಕ್ಷೇಪವೇನು?

ಆಮದು ಮಾಡಿಕೊಂಡ ತಾಳೆ ಎಣ್ಣೆಗೆ 2018ರ ಮಾರ್ಚ್​ 1 ಮತ್ತು 2ರಂದು ಬಿಲ್​ ಆ್​ ಎಂಟ್ರಿಗಳನ್ನು ಪತಂಜಲಿ ಸಲ್ಲಿಸಿತ್ತು. ಆ ದಿನಾಂಕಗಳಂದು ಆಮದು ಸುಂಕ ಶೇ.30 ಇತ್ತು. ಆದರೆ, ಮಾರ್ಚ್​ 6ರಂದು ಆಮದು ಸುಂಕವನ್ನು ಶೇ.44ಕ್ಕೆ ಏರಿಸಿ ಕೇಂದ್ರ ಸರ್ಕಾರ ಗೆಜೆಟ್​ ಪ್ರಕಟಣೆ ಮಾಡಿತ್ತು. ಮಾ.6ರಂದು ಗೆಜೆಟ್​ನಲ್ಲಿ ಪ್ರಕಟವಾಗಿದ್ದರೂ ಅಧಿಸೂಚನೆಯನ್ನು ಮಾರ್ಚ್​ 1ರಂದೇ ಸರ್ಕಾರ ಹೊರಡಿಸಿದೆ ಎಂದು ವಾದಿಸಿದ್ದ ಕೇಂದ್ರ ಸರ್ಕಾರ, ಶೇ.14 ಹೆಚ್ಚುವರಿ ಸುಂಕವನ್ನು ಪತಂಜಲಿಯಿಂದ ಸಂಗ್ರಹಿಸಿತ್ತು. ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.

ಅಧಿಸೂಚನೆ ಪೂರ್ವಾನ್ವಯವಿಲ್ಲ:

ಆಮದು ಮಾಡಿಕೊಂಡ ಸರಕುಗಳು ಕಂಪನಿಯ ಉತ್ಪಾದನಾ ಘಟಕಗಳಿಗೆ ತುರ್ತಾಗಿ ಬೇಕಿದ್ದ ಕಾರಣ ಪತಂಜಲಿ ಹೆಚ್ಚುವರಿ ಸುಂಕ ಪಾವತಿಸಿತ್ತು. ಸರ್ಕಾರದ ಈ ಕ್ರಮವು ಸಾರ್ವಜನಿಕ ಪ್ರಕಟಣೆಯ ಉದ್ದೇಶಗಳನ್ನು ಉಲ್ಲಂಘಿಸಿದೆ. ಅಧಿಕೃತ ಪ್ರಕಟಣೆಗೆ ಮೊದಲೇ ನಿಯಮಗಳನ್ನು ಜಾರಿಗೆ ತರುವುದು ಸಾರ್ವಜನಿಕರನ್ನು ಕತ್ತಲೆಯಲ್ಲಿ ಇರಿಸುತ್ತದೆ. ಆದ್ದರಿಂದ ಕಾಯ್ದೆಯ ಸೆಕ್ಷನ್​ 25(4)ರ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ಅಧಿಸೂಚನೆಗಳನ್ನು ಪೂರ್ವಾನ್ವಯ ಮಾಡುವಂತಿಲ್ಲ ಎಂದು ಪತಂಜಲಿ ನ್ವಾಯಾಲಯದಲ್ದಿಲಿ ವಾದಿಸಿತ್ತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net