ಮತದಾರರ ಪಟ್ಟಿಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ

No political interference allowed in voter lists
No political interference allowed in voter lists
Published on
ಹುಳಿಯಾರು: ಚುನಾವಣಾ ಆಯೋಗವು ಹಮ್ಮಿಕೊಂಡಿರುವ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗಬಾರದು ಮತ್ತು ಪಟ್ಟಿಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು ಎಂದು ಹುಳಿಯಾರು ಪಪಂ ನಾಮನಿರ್ದೇಶಿತ ಸದಸ್ಯ ಸೈಯದ್ ನೂರ್ ಫಕ್ರುದ್ದೀನ್ ತಿಳಿಸಿದರು.
ಪಟ್ಟಣದಲ್ಲಿ ಬೂತ್‌ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಮೂನೆ-೭ ಬಳಸಿ ಕೆಲವರು ದುರುದ್ದೇಶ ಪೂರ್ವಕವಾಗಿ ಜೀವಂತವಿರುವ ಮತ್ತು ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಯತ್ನಿಸುತ್ತಿರುವ ದೂರುಗಳು ಕೇಳಿಬರುತ್ತಿವೆ. ಇಂತಹ ಅರ್ಜಿಗಳನ್ನು ವಿಲೇವಾರಿ ವಾಡುವ ಮುನ್ನ ಬಿಎಲ್‌ಒಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಜ.೧, ೨೦೨೬ಕ್ಕೆ ೧೮ ವರ್ಷ ತುಂಬುವ ಪ್ರತಿಯೊಬ್ಬ ಯುವಕ-ಯುವತಿಯರನ್ನು ಮತದಾರರ ಪಟ್ಟಿಗೆ ಸೇರಿಸಲು ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು ಎಂದರು.
ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ಅರ್ಜಿಗಳ ಸ್ಥಿತಿಗತಿ ಮತ್ತು ಅಂಕಿ-ಅಂಶಗಳನ್ನು ಕಾಲಕಾಲಕ್ಕೆ ಸಾರ್ವಜನಿಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ವಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net