ಕಲಾಭವನದಲ್ಲಿ ಅನ್ಯ ಕಾರ್ಯಕ್ರಮಗಳಿಗೆ ಅವಕಾಶ ಬೇಡ / DODABALLAPUR
ದೊಡ್ಡಬಳ್ಳಾಪುರ ಡಾ.ರಾಜ್ಕುಮಾರ್ ಕಲಾಮಂದಿರವನ್ನು ಕಲಾ ಚಟುವಟಿಕೆಗೆ ಮೀಸಲಿಡಬೇಕು ಎಂದು ಒತ್ತಾಯಿಸಿ ತಾಲೂಕು ಕಲಾವಿದರ ಸಂಘದಿಂದ ತಹಸೀಲ್ದಾರ್ ಮಲ್ಲಪ್ಪ ಕೆ. ಯರಗೋಳಗೆ ಮನವಿ ಸಲ್ಲಿಸಲಾಯಿತು. ತಾಲೂಕು ಕಲಾವಿದರ ಸಂಘದ ಖಜಾಂಚಿ ಮುನಿಪಾಪಯ್ಯ, ಹಿರಿಯ ಕಲಾವಿದ ವೆಂಕಟರಾಜು, ನಿರ್ದೇಶಕ ನಾಗದೇನಳ್ಳಿ ಮಂಜುನಾಥ್, ಕುಂದಾಣ ರವಿ, ಬಸವರಾಜ್, ಮಂಜುನಾಥ್, ಕಲಾವಿದರಾದ ಹಣಗಲಾಪುರ ಅಶ್ವತ್ಥಪ್ಪ, ಚೇತನ್ ಕುಮಾರ್, ಶಿವಕುಮಾರ್, ಜೈರಾಮ್ ಮಾಮಿ, ಮೋಹನ್ ಕುಮಾರ್, ಶ್ರೀನಿವಾಸ್, ಟಿ.ಜಿ.ಮಂಜುನಾಥ್, ಡಿ.ವೆಂಕಟೇಶ್ ಇದ್ದರು.
ದೊಡ್ಡಬಳ್ಳಾಪುರ : ನಗರ ಬಸ್ ನಿಲ್ದಾಣದಲ್ಲಿರುವ ಡಾ.ರಾಜ್ ಕಲಾಭವನವನ್ನು ನಾಟಕ ಮತ್ತು ಕಲಾ ಚಟುವಟಿಕೆಗಳಿಗೆ ಮಾತ್ರ ಮೀಸಲಿಡಬೇಕು ಎಂದು ಒತ್ತಾಯಿಸಿ ತಾಲೂಕು ಕಲಾವಿದರ ಸಂಘದಿಂದ ತಹಸೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಮತ್ತು ನಗರಸಭೆ ಪ್ರಭಾರಿ ಅಧ್ಯಕ್ಷ ಬಂತಿ ವೆಂಕಟೇಶ್ಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಮಾತನಾಡಿ, ಸರ್ಕಾರಿ ಕಾರ್ಯಕ್ರಮಗಳಿಗಾಗಿ ಮೀಸಲಿಟ್ಟಿರುವ ಕಾರಣ ಸಾಂಸತಿಕಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಇತ್ತೀಚೆಗೆ ನಾಟಕೋತ್ಸವ ನಡೆಯುತ್ತಿದ್ದ ವೇಳೆ ಸರ್ಕಾರಿ ಅಧಿಕಾರಿಗಳ ಸಭೆಯ ಕಾರಣ ನೀಡಿ ಸುಮಾರು 2 ಗಂಟೆ ನಾಟಕವನ್ನು ಸ್ಥಗಿತಗೊಳಿಸಿ, ಕಲಾ ಪ್ರದರ್ಶನಕ್ಕೆ ಅಡ್ಡಿ ಪಡಿಸಲಾಗಿತ್ತು ಎಂದರು.
ಜೂ.20ರಿಂದ ಆ.7ರವರೆಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಸಭೆಗೆ ಕಲಾಮಂದಿರ ಮೀಸಲಿಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಲಾಗಿದೆ. ಆದರೆ, ಪ್ರತಿ ವರ್ಷದಂತೆ ಈ ವರ್ಷವೂ ಕಲಾಮಂದಿರದಲ್ಲಿ ಪೌರಾಣಿಕ ನಾಟಕಗಳನ್ನು ಆಯೋಜಿಸಲಾಗಿದೆ. ವರ್ಷದಲ್ಲಿ ಅಂದರೆ ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ನಲ್ಲಿ80ಕ್ಕೂ ಹೆಚ್ಚು ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳು ಸೇರಿದಂತೆ ಇನ್ನಿತರ ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಇಂತಹ ಕಾರ್ಯಕ್ರಮಗಳಿಗಾಗಿ ಜಿಲ್ಲೆಯಲ್ಲಿ ಇರುವುದು ಇದೊಂದೇ ಕಲಾಭವನ. ಸರ್ಕಾರಿ ಕಾರ್ಯಕ್ರಮ ನಡೆಸಲು ಅಂಬೇಡ್ಕರ್ ಭವನ, ಜಗಜೀವನ ರಾಮ್ ಭವನ, ಗುರು ಭವನಗಳಿವೆ. ಕಲಾ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕಿರುವ ಸರ್ಕಾರ ಕಲಾವಿದರ ಕಾರ್ಯಕ್ರಮಗಳಿಗೆ ತಡೆ ಹಾಕುವುದು ಸರಿಯಲ್ಲ ಎಂದರು.
ಕಲಾ ಮಂದಿರವನ್ನು ಕಲಾವಿದರ ಕಾರ್ಯಕ್ರಮಗಳು ಮತ್ತು ಸಾಂಸತಿಕ ಕಾರ್ಯಕ್ರಮಗಳಿಗೆ ಮೀಸಲಿಡಬೇಕು. ಸರ್ಕಾರಿ ಕಾರ್ಯಕ್ರಮಗಳನ್ನು ಬೇರೆಡೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ನಗರಸಭೆ ಅನುಮತಿ ಪಡೆದು ಶುಲ್ಕ ಪಾವತಿಸಿ ಪೂರ್ವ ನಿಯೋಜಿತ ಕಾರ್ಯ ಕ್ರಮಗಳ ಮಧ್ಯೆ ಸರ್ಕಾರಿ ಕಾರ್ಯಕ್ರಮಗಳ ಹೆಸರಿನಲ್ಲಿ ತೊಂದರೆ ಕೊಟ್ಟರೆ ಬೆಂ. ಗ್ರಾಮಾಂತರ ಜಿಲ್ಲೆ ಹಾಗೂ ತಾಲೂಕಿನ ಎಲ್ಲ ಕಲಾವಿದರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.