ನನಗೆ ಪಕ್ಷದ ಸಿದ್ಧಾಂತವೇ ಮುಖ್ಯ: ವಂದೇ ಮಾತರಂನ ಮೊದಲ 2 ಚರಣಕ್ಕಷ್ಟೇ ಬದ್ಧ ಎಂದ ಸಿಎಂ ಡಿ ಕೆ ಶಿವಕುಮಾರ್! | DK Shivakumar

DK Shivakumar | ಸಿಎಂ ಡಿ.ಕೆ. ಶಿವಕುಮಾರ್
DK Shivakumar | ಸಿಎಂ ಡಿ.ಕೆ. ಶಿವಕುಮಾರ್
Published on

ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬ ಕಾಂಗ್ರೆಸ್ ನಿರ್ಧಾರಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಆರೂ ಚರಣಗಳನ್ನು ಹಾಡಿದ್ದು ತಮ್ಮ ಗಮನಕ್ಕೆ ಬಾರದೆ ನಡೆದ ಘಟನೆ ಎಂದಿರುವ ಅವರು, ಮುಂಬರುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಕ್ಷದ ನಿಲುವಿನಂತೆ ಮೊದಲ ಎರಡು ಚರಣಗಳನ್ನಷ್ಟೇ ಹಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇಂಡಿಯಾ ಟುಡೇ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆಶಿ, ನಾನು ಪಕ್ಷದ ಸಿದ್ಧಾಂತವನ್ನು ನಂಬುವವನಾಗಿದ್ದು, ಪಕ್ಷ ಏನು ನಿರ್ಧರಿಸಿದೆಯೋ, ನಾನು ಅದಕ್ಕೆ ಬದ್ಧನಾಗಿದ್ದೇನೆ. ನನ್ನ ಗಮನಕ್ಕೆ ಬಾರದೆ ಅಥವಾ ರಾಜಭವನದಲ್ಲಿ ಅದು ನಡೆದಿರಬಹುದು, ಆದರೆ ಭವಿಷ್ಯದಲ್ಲಿ ಮತ್ತು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾವು ಹಿಂದೆ ತೆಗೆದುಕೊಂಡ ನಿರ್ಧಾರದಂತೆ ಮೊದಲ ಎರಡು ಚರಣಗಳಿಗೇ ಬದ್ಧವಾಗಿರುತ್ತೇವೆ ಎಂದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕಳೆದ ವಾರ 1937ರ ತನ್ನ ನಿರ್ಣಯವನ್ನು ಪುನರುಚ್ಚರಿಸಿದ್ದು, ಸಾರ್ವಜನಿಕ ಮತ್ತು ರಾಷ್ಟ್ರೀಯ ಸಮಾರಂಭಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಹೇಳಿತ್ತು. ನೂತನ ವಂದೇ ಮಾತರಂ ವಿಧೇಯಕವು ರಾಷ್ಟ್ರೀಯ ಗೀತೆಯ ಎಲ್ಲಾ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿದ ನಂತರ ಹಾಗೂ ಇದರ ಗಾಯನದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ರಂಪಾಟ ಉಂಟಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿಗಳಿಂದ ಈ ಹೇಳಿಕೆ ಹೊರಬಿದ್ದಿದೆ.

ರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ತುಷ್ಟಿಕರಣ ರಾಜಕೀಯದ ಕುರಿತು ಮಾತನಾಡಿದ ಶಿವಕುಮಾರ್, ಕಾಂಗ್ರೆಸ್ ಪಕ್ಷವು ವೈವಿಧ್ಯತೆಯನ್ನು ನಂಬುತ್ತದೆ ಎಂದು ಹೇಳಿದರು ಮತ್ತು ಬಿಜೆಪಿ ವಿರುದ್ಧವೇ ತುಷ್ಟಿಕರಣ ರಾಜಕೀಯ ನಡೆಸುತ್ತಿರುವ ಆರೋಪ ಮಾಡಿದರು. ಭಾರತ ವಿವಿಧ ಸಮುದಾಯಗಳನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿದ್ದು, ಬಿಜೆಪಿ ತುಷ್ಟಿಕರಣದ ರಾಜಕೀಯ ಮಾಡುತ್ತಿದೆ, ಆದರೆ ನಾವು ಸಮಾಜದ ಪ್ರತಿಯೊಂದು ವರ್ಗವನ್ನು ನಮ್ಮೊಂದಿಗೆ ಕರೆದೊಯ್ಯುವಲ್ಲಿ ನಂಬಿಕೆ ಇಟ್ಟಿದ್ದೇವೆ. ನಮ್ಮ ಸಿದ್ಧಾಂತವು ಅದನ್ನೇ ಪ್ರತಿನಿಧಿಸುತ್ತದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಸಂಪೂರ್ಣ ವಂದೇ ಮಾತರಂ ಹಾಡದಿರಲು ಕಾಂಗ್ರೆಸ್ ನಿರ್ಧಾರ

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 88 ಹಿರಿಯ ಪಕ್ಷದ ನಾಯಕರು ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಇತ್ತೀಚಿನ ಸಭೆಯ ನಂತರ ಈ ವಿವಾದ ಭುಗಿಲೆದ್ದಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಹಿಂದಿನಂತೆಯೇ, ಅಂದರೆ ಕೇವಲ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಹಾಡಲಾಗುವುದು. ಪಕ್ಷದ ಕಾರ್ಯಕ್ರಮಗಳಲ್ಲಿ ಸಂಪೂರ್ಣ ರಾಷ್ಟ್ರೀಯ ಗೀತೆಯನ್ನು ಹಾಡುವುದಿಲ್ಲ ಎಂದು ನಿರ್ಧರಿಸಲಾಗಿದೆ.

ವಂದೇ ಮಾತರಂ ರಾಜಕೀಯ ವಿವಾದವಾಗಿದ್ದೇಕೆ..?

ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದ ವಂದೇ ಮಾತರಂ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕವಾಗಿ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಗೀತೆಯು ರಾಷ್ಟ್ರೀಯ ಚಳವಳಿಯ ಪ್ರಬಲ ಸಂಕೇತವಾಗಿ ಮಾರ್ಪಟ್ಟಿತ್ತು ಮತ್ತು ಇಂದಿಗೂ ಭಾರತದ ರಾಷ್ಟ್ರೀಯ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ರಾಜಕೀಯ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಗೀತೆಯ ಸಂಪೂರ್ಣ ಆವೃತ್ತಿಯನ್ನು ಎಷ್ಟರಮಟ್ಟಿಗೆ ಹಾಡಬೇಕು ಎಂಬುದರ ಸುತ್ತ ಈಗಿನ ವಿವಾದ ಕೇಂದ್ರೀಕೃತವಾಗಿದೆ. ಸಂಪೂರ್ಣ ಗೀತೆಯನ್ನು ಹಾಡುವುದನ್ನು ಬೆಂಬಲಿಸುವವರು ರಾಷ್ಟ್ರೀಯ ಗೀತೆಯನ್ನು ಅದರ ಸಂಪೂರ್ಣ ರೂಪದಲ್ಲಿ ಗೌರವಿಸಬೇಕು ಎಂದು ವಾದಿಸುತ್ತಿದ್ದರೆ, ಕಾಂಗ್ರೆಸ್ ಮಾತ್ರ ತನ್ನ ಪಕ್ಷದ ಕಾರ್ಯಕ್ರಮಗಳಲ್ಲಿ ಕೇವಲ ಮೊದಲ ಎರಡು ನುಡಿಗಳನ್ನು ಹಾಡುವ ತನ್ನ ಹಳೆಯ ಪದ್ಧತಿಯನ್ನೇ ಉಳಿಸಿಕೊಳ್ಳಲು ನಿರ್ಧರಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net