ಡ್ರಗ್ಸ್​ ಪ್ರಕರಣಗಳಲ್ಲಿ ಉದಾರತೆ ತೋರಿಸಲಾಗದು| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಇಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ
ಬೆಂಗಳೂರು: ಸಮಾಜಕ್ಕೆ ಮತ್ತು ಯುವಪೀಳಿಗೆಗೆ ಭೀಕರ ಹಾನಿಯುಂಟು ಮಾಡುತ್ತಿರುವ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಉದಾರತೆ ತೋರುವುದು ಸರಿಯಲ್ಲ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.
ಅಂತಾರಾಷ್ಟ್ರೀಯ ಡ್ರಗ್ಸ್​ ಜಾಲದ ಪ್ರಮುಖ ಆರೋಪಿಗಳಾದ ದೆಹಲಿ ಮೂಲದ ಜಾಸ್ಲೀನ್​ ಕೌರ್​ ಮತ್ತು ಗುರುಪ್ರೀತ್​ ಕೌರ್​ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಸ್​. ವಿಶ್ವಜಿತ್​ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಹೇಳಿಕೆ ನೀಡಿದೆ. ಬೆಂಗಳೂರಿನಿಂದ ದೆಹಲಿಗೆ ತೆರಳುವ ರಾಜಧಾನಿ ಎಕ್ಸ್​ಪ್ರೆಸ್​ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಬಂಧಿಸಿದೆ.
ತನ್ನಿಂದ ಯಾವುದೇ ಮಾದಕ ವಸ್ತುಗಳನ್ನು ನೇರವಾಗಿ ಜಪ್ತಿ ಮಾಡಿಲ್ಲ. ಕೇವಲ ಇತರ ಆರೋಪಿಗಳ ಹೇಳಿಕೆ ಆಧರಿಸಿ ಬಂಧಿಸಲಾಗಿದೆ ಎಂದು ಗುರುಪ್ರೀತ್​ ವಾದಿಸಿದ್ದರೆ, ತಾನು ಯಾವುದೇ ಅಪರಾದ ಹಿನ್ನೆಲೆ ಇಲ್ಲದ ಯುವತಿಯಾಗಿದ್ದು, ತನ್ನ ಸಂಬಂಧಿ ತೇಜಿಂದರ್​ ಸಿಂಗ್​ ಎಂಬಾತ ಮಾದಕ ವಸ್ತು ಸಾಗಿಸುತ್ತಿದ್ದಾನೆ ಎಂಬ ಅರಿವಿಲ್ಲದೆ ಅವನ ಜತೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದೆ ಎಂದು ಜಾಸ್ಲೀನ್​ ಕೌರ್​ ವಾದಿಸಿದ್ದಳು. ಆದರೆ, ಈ ವಾದಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಡಿಆರ್​ಐ ಅಧಿಕಾರಿಗಳು ಇಬ್ಬರೂ ವ್ಯವಸ್ಥಿತ ಜಾಲದ ಭಾಗವಾಗಿದ್ದಾರೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳನ್ನು ಸಲ್ಲಿಸಿದ್ದರು. ಇದನ್ನು ಹೈಕೋರ್ಟ್​ ಪರಿಗಣಿಸಿದೆ. 

ಬ್ಯಾಂಕಾಕ್​ನಿಂದ ಪೂರೈಕೆ:

ದುಬೈನಲ್ಲಿ ನೆಲೆಸಿರುವ ಹರ್​ಪ್ರೀತ್​ ಸಿಂಗ್​ ಎಂಬಾತ ಬ್ಯಾಂಕಾಕ್​ ಮತ್ತಿತರ ದೇಶಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ಭಾರತಕ್ಕೆ ಸಾಗಿಸುತ್ತಿದ್ದ. ಆತನ ಸಹೋದರನಾದ ಗುರುಪ್ರೀತ್​ ಸಿಂಗ್​ ಭಾರತದಲ್ಲಿ ಹಣಕಾಸಿನ ವ್ಯವಹಾರ ಮತ್ತು ಸಾಗಾಟದ ಹೊಣೆ ಹೊತ್ತುಕೊಂಡಿದ್ದ. ಈ ವಹಿವಾಟುಗಳಿಗೆ ಹವಾಲಾ ಮತ್ತು ಕ್ರಿಪ್ಟೋ ಕರೆನ್ಸಿಗಳ ಮೂಲಕ ಪಾವತಿ ಮಾಡಲಾಗುತ್ತಿತ್ತು ಎಂಬುದು ಡಿಆರ್​ಐ ಪತ್ತೆ ಮಾಡಿತ್ತು. ದೆಹಲಿಯಲ್ಲಿರುವ ಗುರುಪ್ರೀತ್​ ಸಿಂಗ್​ ಮನೆ ಮೇಲೆ ಡಿಆರ್​ಐ ಅಧಿಕಾರಿಗಳು ದಾಳಿ ನಡೆಸಿದಾಗ 1.2 ಕೋಟಿ ರೂಪಾಯಿ ನಗದು ಮತ್ತು ಹಲವು ದೇಶಗಳ ವಿದೇಶಿ ಕರೆನ್ಸಿಗಳು ಪತ್ತೆಯಾಗಿತ್ತು.
ℹ️

ವಿವಿಧ ರಾಜ್ಯಗಳಲ್ಲಿ ಜಾಲ ವಿಸ್ತರಣೆ 

2025ರ ಆ. 20ರಂದು ಬೆಂಗಳೂರಿನ ಕೆಎಸ್​ಆರ್​ ರೈಲ್ವೆ ನಿಲ್ದಾಣದಿಂದ ದೆಹಲಿಗೆ ಹೊರಡಬೇಕಿದ್ದ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಇಬ್ಬರು ಶಂಕಿತರು ಡ್ರಗ್ಸ್​ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಡಿಆರ್​ಐಗೆ ಲಭಿಸಿತ್ತು. ದಾಳಿ ನಡೆಸಿದ್ದ ಅಧಿಕಾರಿಗಳು ತೇಜಿಂದರ್​ ಸಿಂಗ್​ ಮತ್ತು ಜಾಸ್ಲೀನ್​ ಕೌರ್​ ಅವರನ್ನು ತಡೆದು ಪರಿಶೀಲಿಸಿದಾಗ ಅವರ ಬಳಿ ಇದ್ದ 3 ಟ್ರಾಲಿ ಬ್ಯಾಗ್​ಗಳಲ್ಲಿ ಒಟ್ಟು 29 ಕೆ.ಜಿ ತೂಕದ ಗಾಂಜಾ ಪತ್ತೆಯಾಗಿತ್ತು. ಬಂಧಿತರ ಹೇಳಿಕೆ ಆಧರಿಸಿ ಬೆಂಗಳೂರಿನ ಹೋಟೆಲ್​ ಮತ್ತು ಮಧ್ಯಪ್ರದೇಶದಲ್ಲಿ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು 38 ಕೆ.ಜಿ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net