ಹಿಪ್ಪರಗಿ ಕಾರು ಸ್ಫೋಟ ಯಾವುದೇ ಸುಳಿವು ಸಿಕ್ಕಿಲ್ಲ..!

ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಯುವರಾಜ ವೈನ್‌ಶಾಪ್ ಮುಂದೆ ನಿಲ್ಲಿಸಿದ್ದ ಎಕ್ಸ್‌ಯುವಿ 300 ಕಾರು ಸ್ಫೋಟಗೊಂಡ ಸ್ಥಳಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು.
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಯುವರಾಜ ವೈನ್‌ಶಾಪ್ ಮುಂದೆ ನಿಲ್ಲಿಸಿದ್ದ ಎಕ್ಸ್‌ಯುವಿ 300 ಕಾರು ಸ್ಫೋಟಗೊಂಡ ಸ್ಥಳಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಹೇಳಿಕೆ
  • ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು
ಜಮಖಂಡಿ: ಹಿಪ್ಪರಗಿ ಕಾರು ಸ್ಫೋಟವನ್ನು ವಿವಿಧ ಆಯಾಮಗಳಲ್ಲಿ, ವಿವಿಧ ತಂಡಗಳಿಂದ ತನಿಖೆ ಮಾಡಲಾಗುತ್ತಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಹೇಳಿದರು.
ತಾಲೂಕಿನ ಹಿಪ್ಪರಗಿ ಗ್ರಾಮದ ಯುವರಾಜ ವೈನ್‌ಶಾಪ್ ಮುಂದೆ ನಿಲ್ಲಿಸಿದ್ದ ಎಕ್ಸ್‌ಯುವಿ 300 ಕಾರು ಸ್ಫೋಟಗೊಂಡ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ಅವರು, ಪ್ರಾಥಮಿಕ ಪರಿಶೀಲನೆ ವೇಳೆ ಸ್ಫೋಟಕ ಬಳಕೆಯ ಯಾವುದೇ ಸುಳಿವು ಸಿಕ್ಕಿಲ್ಲ ಎಂದರು.
ಎಸ್‌ಪಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಕಾರು ಸಂಜೆ 4-30 ರಿಂದ 10-45ರ ವರೆಗೆ ಸಿಸಿಟಿವಿ ಕಣ್ಗಾವಲಿನಲ್ಲಿತ್ತು. ಇದುವರೆಗೆ ಯಾವುದೇ ಅನುಮಾನಾಸ್ಪದ ವ್ಯಕ್ತಿಯ ಚಲನವಲನ ಕಂಡುಬಂದಿಲ್ಲ. ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳ, ಶ್ವಾನದಳ, ಎಸ್‌ಒಸಿಒ ಹಾಗೂ ವಿಧಿ ವಿಜ್ಞಾನ ತಜ್ಞರ ವಿವಿಧ ತಂಡಗಳು ವೈಜ್ಞಾನಿಕ ರೀತಿಯಲ್ಲಿ ಪರಿಶೀಲನೆ ಮಾಡಿದ್ದು, ಯಾವುದೇ ಸ್ಫೋಟಕ ಬಳಕೆಯ ಸುಳಿವು ಸಿಕ್ಕಿಲ್ಲ. ಬ್ಯಾಟರಿ ಅಥವಾ ಇತರೆ ತಾಂತ್ರಿಕ ದೋಷದ ಕುರಿತು ತನಿಖೆ ಮಾಡಲಾಗುತ್ತಿದೆ ಎಂದರು.
ಕಾರಿಗೆ ಸಂಭವಿಸಿರುವ ಹಾನಿಯನ್ನು ಪರಿಶೀಲಿಸಿದಾಗ ಅದು ಎರಡು ಹಂತಗಳಲ್ಲಿ ಆಗಿರುವ ಸಾಧ್ಯತೆ ಇದೆ. ಮೊದಲಿಗೆ ಸಂಭವಿಸಿದ ಸ್ಫೋಟದಿಂದ ಕಾರಿಗೆ ಹಾನಿಯಾಗಿದ್ದು, ನಂತರ ಕಾರು ಪಲ್ಟಿಯಾದ ಪರಿಣಾಮ ಮತ್ತಷ್ಟು ಹಾನಿಯಾಗಿದೆ. ಈ ಎರಡರ ನಡುವಿನ ವ್ಯತ್ಯಾಸವನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿ ಬ್ಯಾಟರಿ, ಇಂಜಿನ್ ಅಥವಾ ಇತರ ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ವಾಹನ ತಜ್ಞರು ಹಾಗೂ ಮೆಕ್ಯಾನಿಕಲ್ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಅಂತಿಮ ತಾಂತ್ರಿಕ ವರದಿ ಬಂದ ಬಳಿಕ ಸ್ಫೋಟಕ್ಕೆ ನಿಖರ ಕಾರಣ ತಿಳಿಯಲಿದೆ. ಸ್ಫೋಟದ ನಿಖರ ಕಾರಣ ತಿಳಿಯುವವರೆಗೆ ಯಾವುದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಯಾವುದೇ ವ್ಯಕ್ತಿಯ ಕೈವಾಡ ಕಂಡು ಬಂದಲ್ಲಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಘಟನೆ ಸ್ಥಳೀಯವಾಗಿ ಕಾರಿನಲ್ಲೇ ಸಂಭವಿಸಿರುವ ತಾಂತ್ರಿಕ ಘಟನೆ ಆಗಿರುವ ಸಾಧ್ಯತೆ ಹೆಚ್ಚಿದ್ದು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದರು.
ಡಿವೈಎಸ್ಪಿ ಸೈಯದ್ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ, ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net