ಎಚ್​. ವಿಶ್ವನಾಥ್​ ವಿರುದ್ಧ ಪ್ರಕರಣ ರದ್ದಿಲ್ಲ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಅರ್ಜಿ ವಜಾಗೊಳಿಸಿದ ಹೈಕೋರ್ಟ್​
  • ಬೈರತಿ ಸುರೇಶ್​ ದಾಖಲಿಸಿರುವ ಮಾನಹಾನಿ ಕೇಸ್​
ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್​ ದಾಖಲಿಸಿರುವ 50 ಕೋಟಿ ರೂಪಾಯಿ ಮೊತ್ತದ ಕ್ರಿಮಿನಲ್​ ಮಾನಹಾನಿ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಮಾಜಿ ವಿಧಾನಪರಿಷತ್​ ಸದಸ್ಯ ಎಚ್​. ವಿಶ್ವನಾಥ್​ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ನ್ಯಾಯಮೂರ್ತಿ ಅನಂತ್​ ರಾಮನಾಥ್​ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಈ ಆದೇಶ ನೀಡಿದೆ.
ಸಚಿವ ಬೈರತಿ ಸುರೇಶ್​ ಪರ ವಾದಿಸಿದ ವಕೀಲರು, ವಿಶ್ವನಾಥ್​ ಅವರು ಸುಳ್ಳು ಆರೋಪಗಳನ್ನು ಹೊರಿಸಿ ಮಾನಹಾನಿ ಮಾಡಿದ್ದಾರೆ. ಆದ್ದರಿಂದ ಪ್ರಕರಣ ದಾಖಲಿಸಲಾಗಿದೆ. ವಿಚಾರಣಾ ನ್ಯಾಯಾಲಯವು ಈಗಾಗಲೇ ಪ್ರಾಥಮಿಕ ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಅರ್ಜಿದಾರರು ವಿಚಾರಣೆ ಎದುರಿಸಿ ಖುಲಾಸೆಯಾಗಲಿ ಎಂದರು.
ಅರ್ಜಿದಾರರ ಪರ ವಾದಿಸಿದ ವಕೀಲರು, ಯಾವುದೇ ದುರುದ್ದೇಶವಿಲ್ಲದೆ ಹೇಳಿಕೆ ನೀಡಲಾಗಿದೆ. ಆ ರೀತಿಯ ಹೇಳಿಕೆಗಳು ಕ್ರಿಮಿನಲ್​ ಮಾನಹಾನಿಯಾಗುವುದಿಲ್ಲ. ಸಂಧಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಆದರೆ, ಯಾವುದೇ ಸಂಧಾನ ಪ್ರಕ್ರಿಯೆ ಸಾಧ್ಯವಿಲ್ಲ ಎಂದು ಬೈರತಿ ಸುರೇಶ್​ ಪರ ವಕೀಲರು ಪ್ರತಿಕ್ರಿಯಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಸಾಾಧಾರಗಳನ್ನು ಪರಿಗಣಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ:

2024ರಲ್ಲಿ ಸಚಿವ ಬೈರತಿ ಸುರೇಶ್​ ವಿರುದ್ಧ ಎಚ್​.ವಿಶ್ವನಾಥ್​ ಗಂಭೀರ ಆರೋಪಗಳನ್ನು ಮಾಡಿದ್ದರು. ಸುರೇಶ್​ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಭೂ ಪರಿವರ್ತನೆಗೆ ಹಣ ನಿಗದಿಪಡಿಸಲಾಗಿದೆ ಮತ್ತು ಮುಡಾದ ಮಾಜಿ ಅಧಿಕಾರಿಗಳಾದ ನಟೇಶ್​ ಹಾಗೂ ದಿನೇಶ್​ ಜತೆ ಸೇರಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ವಿಶ್ವನಾಥ್​ ಆರೋಪಿಸಿದ್ದರು. ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಹಾಗೂ ಆಧಾರರಹಿತವಾದ ಆರೋಪಗಳನ್ನು ಮಾಡಲಾಗಿದೆ ಎಂದು ಬೈರತಿ ಸುರೇಶ್​ ಅವರು ಕ್ರಿಮಿನಲ್​ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net