"ನೈಸ್​" ನೈಸಾಗಿಲ್ಲ, ಇದು ರಾಜ್ಯದ ದೊಡ್ಡ ಹಗರಣ| High court ಕಿಡಿ

High court
High court
Published on
ಬೆಂಗಳೂರು:
ಬೆಂಗಳೂರು-ಮೈಸೂರು ಮೂಲಸೌಕರ್ಯ ಯೋಜನೆಯಲ್ಲಿ (ಬಿಎಂಐಸಿ) ಯೋಜನೆಯಲ್ಲಿ "ನೈಸ್​' ಅನ್ನುವಂತದ್ದು ಏನೂ ಇಲ್ಲ. ಈ ಯೋಜನೆಯು ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿರಬಹುದು ಎಂದು ಹೈಕೋರ್ಟ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಯೋಜನೆ ನೆಪದಲ್ಲಿ ದಶಕಗಳಿಂದ ಭೂಮಿ ಕಳೆದುಕೊಂಡು ಪರಿಹಾರವೂ ಸಿಗದೆ ಕಂಗಾಲಾಗಿದ್ದ ರೈತರ ಜಮೀನಿನ ಅಧಿಸೂಚನೆಯನ್ನು ರದ್ದುಪಡಿಸಿ 2025ರ ಜುಲೈನಲ್ಲಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ನಂದಿ ಎಕನಾಮಿಕ್​ ಕಾರಿಡಾರ್​ ಎಂಟರ್​ಪ್ರೆೃಸ್​ (ನೈಸ್​) ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್​ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಸಂವಿಧಾನ ಖಾತ್ರಿ ಪಡಿಸಿರುವ ಮೂಲಭೂತ ಹಕ್ಕು ಮತ್ತು ಪರಿಹಾರವನ್ನು ನೀಡದೆ ರೈತರ  ಜಮೀನು ಹಾಗೂ ಅವರ ತಲೆಮಾರಿನ ಜೀವನೋಪಾಯವನ್ನು ದೋಚಲಾಗಿದೆ. ನೈಸರ್ಗಿಕ  ಸಂಪನ್ಮೂಲಗಳ ರಕ್ಷಕನಾಗಿರಬೇಕಿದ್ದ ಸರ್ಕಾರವೇ, ಸಾರ್ವಜನಿಕ ಹಿತಾಸಕ್ತಿಯನ್ನು ಬಲಿಕೊಟ್ಟು ಖಾಸಗಿ ಸಂಸ್ಥೆಯ ಲಾಭಕ್ಕೆ ಹೇಗೆ ಸಾಥ್​ ನೀಡಬಹುದು ಎಂಬುದಕ್ಕೆ ಈ ಯೋಜನೆ ಉದಾಹರಣೆ. ಇದು ಮೂಲಸೌಕರ್ಯ ಅಭಿವೃದ್ಧಿಯಲ್ಲ. ಬದಲಿಗೆ ಸಾಂವಿಧಾನಿಕ ಚೌಕಟ್ಟಿಗೆ ಎಸಗಿದ ದ್ರೋಹ ಎಂದು ನ್ಯಾಯಪೀಠ ಕಟುವಾಗಿ ಹೇಳಿದೆ.

ಪ್ರಕರಣದ ಹಿನ್ನೆಲೆ:

1998 ರಿಂದ 2009 ರ ನಡುವೆ ಸಾವಿರಾರು ಎಕರೆ ಜಮೀನು ವಶಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ 23 ವರ್ಷಗಳು ಕಳೆದರೂ ರೈತರಿಗೆ ಪರಿಹಾರವನ್ನೇ ನೀಡಿರಲಿಲ್ಲ. ಇತ್ತ ಜಮೀನನ್ನು ಮಾರಾಟ ಮಾಡಲು, ಅಡಮಾನವಿಡಲು ಅಥವಾ ಕೃಷಿ ಮಾಡಲು ಸಾಧ್ಯವಾಗದೆ ಭೂಮಾಲೀಕರು ಸಂಕಷ್ಟದಲ್ಲಿದ್ದರು. ಈ ಭೂಸ್ವಾಧಿನ ಪ್ರಕ್ರಿಯೆಯನ್ನು ಪ್ರಶ್ನಿಸಿ 68ಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ ಸಂಬಂಧಿಸಿದ ಜಮೀನಿನ ಭೂಸ್ವಾಧಿನವನ್ನು ರದ್ದುಪಡಿಸಿ ಜಮೀನನ್ನು ಅವರಿಗೆ ಮರಳಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. 
ℹ️

ಸ್ವತಂತ್ರ ತನಿಖೆ ಅಗತ್ಯ 

ಈ ಯೋಜನೆಯ ಆರಂಭದಿಂದ ಈವರೆಗೆ ನಡೆದಿರುವ ಭೂಸ್ವಾಧಿನ ಪ್ರಕ್ರಿಯೆ, ಒಪ್ಪಂದಗಳು ಮತ್ತು ಕೋಟ್ಯಂತರ ರೂಪಾಯಿ ಹಣಕಾಸಿನ ವಹಿವಾಟಿನ ಬಗ್ಗೆ ಆಡಿಟ್​ ಮತ್ತು ಸ್ವತಂತ್ರ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಅವಲೋಕನ ಮಾಡಿದೆ. 111 ಕಿ.ಮೀ ಎಕ್ಸ್​ಪ್ರೆಸ್​ವೇ ಹಾಗೂ ಉಪನಗರಗಳನ್ನು ನಿರ್ಮಿಸುವ ಉದ್ದೇಶದಿಂದ ಜಮೀನು ಪಡೆಯಲಾಗಿತ್ತು. ಆದರೆ ಯೋಜನೆಯ ಪ್ರವರ್ತಕರು ಜಮೀನನ್ನು ರಿಯಲ್​ ಎಸ್ಟೇಟ್​ಗೆ ಬಳಸಿಕೊಂಡು ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ, ಆದರೆ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗಿಲ್ಲ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ಯೋಜನೆಯನ್ನು ಏಕೆ ರದ್ದುಪಡಿಸಿಲ್ಲ?:
ಯೋಜನೆಯ ಆರಂಭದ ಹಂತದಲ್ಲಿ ಮಾಡಿರುವ ಒಪ್ಪಂದದಂತೆ ಕಳೆದ 25 ವರ್ಷಗಳಲ್ಲಿ 111 ಕಿ.ಮೀ. ಎಕ್ಸ್​ಪ್ರೆಸ್​ವೇ ಮತ್ತು 5 ಉಪನಗರಗಳನ್ನು ನಿರ್ಮಿಸಲು ನೈಸ್​ ಸಂಸ್ಥೆ ಸಂಪೂರ್ಣ ವಿಲವಾಗಿದೆ. ಒಪ್ಪಂದದ ಕರಾರುಗಳನ್ನು ಬಹಿರಂಗವಾಗಿ ಸಂಸ್ಥೆಯು ಉಲ್ಲಂಘಿಸಿದ್ದರೂ, ರಾಜ್ಯ ಸರ್ಕಾರವು ಈ ಒಪ್ಪಂದವನ್ನು ಏಕೆ ಮರುಪರಿಶೀಲಿಸುತ್ತಿಲ್ಲ ಅಥವಾ ರದ್ದುಪಡಿಸುತ್ತಿಲ್ಲ ಎಂದು ಸರ್ಕಾರದ ನಡೆಯನ್ನು ಆದೇಶದಲ್ಲಿ ನ್ಯಾಯಪೀಠ ಪ್ರಶ್ನಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net