ಬೆಂಗಳೂರು ಮಹಿಳೆ ವಿರುದ್ಧ ಎನ್ಐಎ ಚಾರ್ಜ್​​ಶೀಟ್​​

nia
nia
Published on
ನವದೆಹಲಿ: ನಿಷೇಧಿತ ಅಲ್ ಖೈದಾ ಉಗ್ರ ಸಂಘಟನೆಯ ಸಿದ್ಧಾಂತವನ್ನು ಆನ್ಲೈನ್ ಮೂಲಕ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಐವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ಅಹಮದಾಬಾದ್​ನ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆರೋಪಿಗಳ ಪೈಕಿ ಶಮಾ ಪರ್ವೀನ್ ಎಂಬಾಕೆ ಬೆಂಗಳೂರಿನ ಮಹಿಳೆ. ಅಹಮದಾಬಾದ್ನ ಶೇಖ್ ಮೊಹಮ್ಮದ್ ಫರ್ದೀನ್, ಗುಜರಾತ್ನ ಮೊದಸಾದಲ್ಲಿನ ಕುರೇಷಿ ಸೆಫುಲ್ಲಾ, ದೆಹಲಿಯ ಮೊಹಮ್ಮದ್ ಫೈಕ್, ಉತ್ತರಪ್ರದೇಶದ ನೋಯ್ದಾದ ಜೀಶನ್ ಅಲಿ ಇತರ ಆರೋಪಿಗಳು. ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಪೋಸ್ಟ್​​ಗಳನ್ನು ಹಂಚಿಕೊಳ್ಳುವ ಮೂಲಕ ಯುವಜನರನ್ನು ಪ್ರಚೋದಿಸುತ್ತಿದ್ದರು ಮತ್ತು ಶಸ್ತ್ರಸಜ್ಜಿತ ಕ್ರಾಂತಿಗೆ ಕರೆ ನೀಡಿದ್ದರು ಎಂದು ಎನ್ಐಎ ತಿಳಿಸಿದೆ. ತನಿಖೆ ವೇಳೆ ಇವರಿಂದ ಪಿಸ್ತೂಲ್ ಸೇರಿದಂತೆ ಮಾರಕಾಸ್ತ್ರಗಳನ್ನು ಮತ್ತು ಮಹತ್ವದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಗುಜರಾತ್ ಎಟಿಎಸ್ನಿಂದ ಎನ್ಐಗೆ ಹಸ್ತಾಂತರವಾಗಿತ್ತು.
ಪಾಕ್ ವ್ಯಕ್ತಿ ಜತೆ ಸಂಪರ್ಕ: ಬೆಂಗಳೂರಿನ ಶಮಾ ಪರ್ವೀನ್ ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಬಳಿಕ ಮೂಲಭೂತವಾದಿ ವಿಷಯ ಉತ್ತೇಜಿಸುವ ಉಗ್ರಗಾಮಿ ಗುಂಪುಗಳಲ್ಲಿ ಸಕ್ರಿಯವಾಗಿದ್ದು, ಆ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ಪ್ರಚಾರ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಆಕೆ ಪಾಕಿಸ್ತಾನಿ ಪ್ರಜೆ ಸುಮೇರ್ ಅಲಿ ಜತೆ ನಿಯಮಿತವಾಗಿ ಸಂಪರ್ಕದಲ್ಲಿದ್ದು, ಸ್ಕ್ರೀನ್​ಶಾಟ್​ಗಳನ್ನು ಹಂಚಿಕೊಂಡಿದ್ದಳು. ಅಲ್ಲದೆ ನಿಷೇಧಿತ ಸಾಹಿತ್ಯ, ಕಾರ್ಯಚರಣೆಗಳ ಬಗ್ಗೆ ಚರ್ಚಿಸಿದ್ದಳು. ಆಕೆಯ ಮೊಬೈಲ್​ ಫೋನ್​ನಲ್ಲಿ ಉಗ್ರಗಾಮಿ ನಿಲುವಿನವರು ಬರೆದ ಅಪರಾಧಿ ಪುಸ್ತಕಗಳು, ವೀಡಿಯೊಗಳು ಮತ್ತು ಪಾಕಿಸ್ತಾನಿ ಸಂಪರ್ಕ ಸಂಖ್ಯೆಗಳಿದ್ದವು. ಅವೆಲ್ಲವನ್ನೂ ತನಿಖೆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net