ಪತ್ರಿಕಾ ವಿತರಕರಿಂದ ಮೆಜೆಸ್ಟಿಕ್‌ನಲ್ಲಿ ಪತ್ರಿಕಾ ದಿನಾಚರಣೆ ನ್ಯೂಸ್ ಪೇಪರ್ ಡಿಸ್ಟ್ರಿಬ್ಯೂಟರ್ಸ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ
patrika vitarakaru
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನ್ಯೂಸ್ ಪೇಪರ್ ಡಿಸ್ಟ್ರಿಬ್ಯೂಟರ್ಸ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ
ಚಳಿ, ಮಳೆ, ಬಿಸಿಲೆನ್ನದೆ ದುಡಿಯುವ ಪತ್ರಿಕಾ ವಿತರಕರು ಮಾಧ್ಯಮ ಕ್ಷೇತ್ರದ ಬೆನ್ನೆಲುಬು.
ಬೆಂಗಳೂರು:
ಪತ್ರಿಕಾ ವಿತರಕರು ಮಾಧ್ಯಮ ಸಂಸ್ಥೆಗಳ ನರನಾಡಿಗಳಿಗೆ ಆಮ್ಲಜನಕ ಇದ್ದಂತೆ. ಪ್ರತಿನಿತ್ಯ ಯಾವುದೇ ಹವಾಮಾನವನ್ನೂ ಲೆಕ್ಕಿಸದೆ ಪತ್ರಿಕೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಅವರ ಸೇವೆ ಅತ್ಯಂತ ಶ್ಲಾಘನೀಯ ಎಂದು ನಿಕಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಗಾಂಧಿ ನಗರ ಶಾಖೆ ಮೆಜೆಸ್ಟಿಕ್ ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ನ್ಯೂಸ್ ಪೇಪರ್ ಡಿಸ್ಟ್ರಿಬ್ಯೂಟರ್ಸ್ ಚಾರಿಟಬಲ್ ಟ್ರಸ್ಟ್‌ನ್ನು ಉದ್ಘಾಟಿಸಿ ಮಾತನಾಡಿದರು.
ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಪತ್ರಿಕೋದ್ಯಮದಲ್ಲಿ ತಾವು ನಡೆದು ಬಂದ ಹಾದಿಯನ್ನು ವಿವರಿಸಿದರು. ಸಿದ್ದರಾಮಯ್ಯ ಅವರ ಕಾಲದಲ್ಲಿ ಪತ್ರಿಕಾ ವಿತರಕರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗಿದೆ ಎಂದರು.
ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಚಳಿ, ಮಳೆ, ಬಿಸಿಲೆನ್ನದೆ ದುಡಿಯುವ ಪತ್ರಿಕಾ ವಿತರಕರು ಮಾಧ್ಯಮ ಕ್ಷೇತ್ರದ ಬೆನ್ನೆಲುಬು. ಅವರ ಸೇವೆಯನ್ನು ಸಮಾಜ ಸದಾ ಗೌರವಿಸಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ವಿತರಕರಿಗೆ ನ್ಯಾಯ ದೊರಕಿಸಲು ಕೆ. ಶಂಭುಲಿಂಗ ಅವರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೆ.ವಿ. ಪ್ರಭಾಕರ್ ಅವರ ಸಹಕಾರದಿಂದ ಹಲವು ಸೌಲಭ್ಯಗಳು ದೊರೆತಿವೆ. ಸಂಘಟನೆ ಇದ್ದರೆ ಮಾತ್ರವೇ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಈ ಹೋರಾಟ ಸಾಬೀತುಪಡಿಸಿದೆ ಎಂದು ಹೇಳಿದರು.
ಐಎಫ್‌ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಉಪಾಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ಸುರೇಶ್, ಸಂಗಂ, ಗೋಪಾಲ, ಜಗದೀಶ್, ದೇವರಾಜ್, ನಾಗರತ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
* ಚಳಿ, ಮಳೆ, ಬಿಸಿಲೆನ್ನದೆ ದುಡಿಯುವ ಪತ್ರಿಕಾ ವಿತರಕರು ಮಾಧ್ಯಮ ಕ್ಷೇತ್ರದ ಬೆನ್ನೆಲುಬು. ಅವರ ಸೇವೆಯನ್ನು ಸಮಾಜ ಸದಾ ಗೌರವಿಸಬೇಕು.-ರವಿ ಹೆಗಡೆ