ಹೊಸ ವರ್ಷದ ಸಂಭ್ರಮ; ಸಿಲಿಕಾನ್​ ಸಿಟಿಯಲ್ಲಿ ಖಾಕಿ ಹದ್ದಿನ ಕಣ್ಣಿಡುವಂತೆ CM ಖಡಕ್ ಸೂಚನೆ

New Year Celebrations
New Year Celebrations
Published on
ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರು ಮಹಾ ನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಮುಖ್ಯಮಂತ್ರಿಯವರು ನೀಡಿದ ಸೂಚನೆಗಳು

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.
ಹೊಸ ವರ್ಷಾಚರಣೆ ಬಳಿಕ ಜನರು ಸುಲಭವಾಗಿ ಜನರು ತಮ್ಮ ಮನೆಗಳಿಗೆ ಹಿಂತಿರುಗಲು ಅನುಕೂಲವಾಗುವಂತೆ ಮಧ್ಯರಾತ್ರಿ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆಯನ್ನು ಮಾಡಬೇಕು.
ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟೀಟ್‌, ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆಯಾಗಿ ಯಾವುದೇ ಅನಾಹುತವಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಬೇಕು.
ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ಬೆಂಗಳೂರು ನಗರದಲ್ಲಿ ನಿಯೋಜಿಸಲಾಗುತ್ತಿದ್ದು, ಬೇರೆ ಜಿಲ್ಲೆಗಳಿಂದ 1200 ಪೊಲೀಸರನ್ನು ಈ ಬಾರಿ ನಿಯೋಜಿಸುತ್ತಿದ್ದೇವೆ. ಮಹಿಳಾ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು. ಚೆನ್ನಮ್ಮ ಪಡೆಗಳನ್ನು ಸಕ್ರಿಯವಾಗಿ ನಿಯೋಜಿಸಬೇಕು.
ನಗರದಲ್ಲಿ ಹೊಸ ವರ್ಷಾಚರಣೆ ಸುಗಮವಾಗಿ ನಡೆಯಲು ಸಾಧ್ಯವಾಗುವಂತೆ 4 ಕಂಟ್ರೋಲ್‌ ರೂಂ, 78 ಕಾವಲು ಗೋಪುರ, 164 ಮಹಿಳಾ ಸಹಾಯ ಡೆಸ್ಕ್‌, 55 ಅಂಬುಲೆನ್ಸ್ಗಳ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ 3,500 ಡ್ರಿಂಕ್‌ ಆಂಡ್‌ ಡ್ರೈವ್‌ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಗರದಲ್ಲಿರುವ 50 ಫ್ಲೈ ಓವರ್ಗಳಲ್ಲಿ ಹೊಸ ವರ್ಷಾಚರಣೆ ರಾತ್ರಿ ದ್ವಿಚಕ್ರ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು.
ಕಿಡಿಗೇಡಿಗಳ ಮೇಲೆ ನಿರಂತರ ನಿಗಾ ಇರಿಸಬೇಕು. ವ್ಹೀಲಿಂಗ್‌ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಾದಕ ದ್ರವ್ಯ ಚಟುವಟಿಕೆಗಳ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು; ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅವರು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net