ನಾನು ಪೌರಕಾರ್ಮಿಕನಾಗಿದ್ದೆ ಆ ವರ್ಗದ ಕಷ್ಟದ ಅರಿವಿದೆ: ವಿಜಯವಾಣಿ ಕಚೇರಿಯಲ್ಲಿ ನೆನಪುಗಳನ್ನು ಮೆಲುಕು ಹಾಕಿದ ನೂತನ ಸಚಿವ ಬಸವಂತಪ್ಪ

New Minister Basavantappa > ವಿಜಯವಾಣಿ ಕಚೇರಿಯಲ್ಲಿ ನೆನಪುಗಳನ್ನು ಮೆಲುಕು ಹಾಕಿದ ನೂತನ ಸಚಿವ ಬಸವಂತಪ್ಪ
New Minister Basavantappa > ವಿಜಯವಾಣಿ ಕಚೇರಿಯಲ್ಲಿ ನೆನಪುಗಳನ್ನು ಮೆಲುಕು ಹಾಕಿದ ನೂತನ ಸಚಿವ ಬಸವಂತಪ್ಪ
Published on

ಬೆಂಗಳೂರು: ಡಿ.ಕೆ.ಶಿವಕುಮಾರ್​ ಸಂಪುಟದಲ್ಲಿ ಅಚ್ಚರಿ ಆಯ್ಕೆ ಎಂಬಂತೆ ಮಾಯಕೊಂಡ ಶಾಸಕ ಕೆ.ಎಸ್​.ಬಸವಂತಪ್ಪ ಅವಕಾಶ ಪಡೆದುಕೊಂಡಿದ್ದಾರೆ. ಅವರ ಆಯ್ಕೆ ಬಗ್ಗೆ ಕಾಂಗ್ರೆಸ್​ ವಲಯದಲ್ಲಿ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಏಕೆಂದರೆ ಬಸವಂತಪ್ಪರನ್ನು ಅತೀ ಹತ್ತಿರದಿಂದ ಕಂಡ ಜನರಿಗೆ ಖುಷಿ ತಂದಿದೆ.

ಬಸವಂತಪ್ಪ ಸೋಮವಾರ ವಿಜಯವಾಣಿ ಕಚೇರಿಗೆ ಆಗಮಿಸಿದ ವೇಳೆ ಸಂಪಾದಕೀಯ ಬಳಗದ ಜತೆ ಲೋಕಾಭಿರಾಮ ಚರ್ಚೆ ನಡೆಸಿದರು. ಈ ವೇಳೆ ತಮ್ಮ ಹಳೆಯ ನೆನಪು ಮತ್ತು ತಾವು ಮುಂದೆ ಸಾಗುವ ಹಾದಿಯ ಬಗ್ಗೆ ಸೂಚ್ಯವಾಗಿ ತಿಳಿಸಿದರು.
ರಸ್ತೆ ಕಸ ಗುಡಿಸಿದ್ದೆ: ನನ್ನ ತಾಯಿ ಪೌರಕಾರ್ಮಿಕರಾಗಿದ್ದರು, ಅವರಿಗೆ ನೀಡಿದ್ದ ವಾರ್ಡ್​ ಬಹಳ ದೊಡ್ಡದಿತ್ತು. ಅವರಿಗೆ ಕೆಲಸದ ಹೊರೆಯಾಗುತ್ತಿತ್ತು. ಹೀಗಾಗಿ ಅವರ ಜತೆ ನಾನೂ ಸಹ ಕಸ ಗುಡಿಸಲು ಹೋಗುತ್ತಿದ್ದೆ. ದಾವಣಗೆರೆಯಲ್ಲಿ ಪ್ರಮುಖ ರಾಜಕೀಯ ನಾಯಕರೊಬ್ಬರ ಮನೆ ಇದ್ದ ಸ್ಥಳದಲ್ಲಿ ಕಸ ಗುಡಿಸಿದ್ದು ಈಗಲೂ ನೆನಪಿದೆ. ಅದೆಲ್ಲ ಮರೆಯುವ ವಿಚಾರವೂ ಅಲ್ಲ. ಕಸ ಗುಡಿಸಿ ಬಂದ ಬಳಿಕ ಶಾಲೆಗೆ ಹೋಗುತ್ತಿದ್ದೆ. ಹಳೆಯದೆಲ್ಲ ಈಗಲೂ ಕಣ್ಣಮುಂದೆ ಬರುತ್ತದೆ. ಈ ಕಾಯಕ ಮಾಡುವ ವರ್ಗ ಇಂದಿಗೂ ಕಷ್ಟ ಅನುಭವಿಸುತ್ತಿದೆ. ಸರ್ಕಾರದ ಅನೇಕ ರೀತಿಯಲ್ಲಿ ಕ್ರಮಕೈಗೊಂಡಿದ್ದರೂ ಇನ್ನಷ್ಟು ಆಗಬೇಕಾದ ಕೆಲಸ ಇದೆ. ನಾನು ಸಚಿವನಾಗಿ ನನ್ನದೂ ಜವಾಬ್ದಾರಿ ಇದೆ ಎಂದು ಬಸವಂತಪ್ಪ ಹೇಳಿದರು.
ಊಟವಿಲ್ಲದ ದಿನಗಳು: ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಅನೇಕ ಸಂದರ್ಭದಲ್ಲಿ ಊಟವಿಲ್ಲದ ದಿನಗಳನ್ನು ಕಳೆದಿದ್ದಿದೆ. ರಾತ್ರಿ ನಾನು ಮನೆಗೆ ಆಗಮಿಸುವಾಗ ಅಮ್ಮ ದಣಿದು ನಿದ್ರಿಸುತ್ತಿದ್ದರು. ಊಟಕ್ಕೆ ಅವಕಾಶ ಇಲ್ಲದ ದಿನಗಳು ಇದ್ದವು ಎಂದು ನೆನಪಿಸಿಕೊಂಡ ಅವರು, ಈಗಲೂ ಬಾಡಿಗೆ ಮನೆಯಲ್ಲಿ ಇದ್ದೇನೆ ಎಂದು ಸಣ್ಣ ದನಿಯಲ್ಲಿ ಹೇಳಿದರು.
ಪೋಸ್ಟರ್​ ಬಾಯ್​: ಎಚ್​.ಆಂಜನೇಯ ಅವರು ಯುವ ಕಾಂಗ್ರೆಸ್​ ನಾಯಕರು. ಆ ಸಂದರ್ಭದಲ್ಲಿ ಪಕ್ಷದ ಪರವಾಗಿ ಪೋಸ್ಟರ್​, ಬ್ಯಾನರ್​ ಹಾಕುವುದು ನನ್ನ ಕೆಲಸವಾಗಿತ್ತು. ದಾವಣಗೆರೆ, ಬೆಂಗಳೂರು ಸೇರಿ ಅನೇಕ ಊರುಗಳಿಗೆ ಹೋಗಿ ಪೋಸ್ಟರ್​ ಅಂಟಿಸಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದೇನೆ. ಈಗ ಕಾಂಗ್ರೆಸ್​ ನನ್ನನ್ನು ಗುರುತಿಸಿದೆ ಎಂದು ಸ್ಮರಿಸಿದರು.

ಮೃತದೇಹಗಳಿಗೂ ಮುಕ್ತಿ ಸೇವೆ

ಕೋವಿಡ್​ ಸೇರಿ ಅನೇಕ ಸಂದರ್ಭದಲ್ಲಿ ಮೃತ ದೇಹಗಳನ್ನು ಸಾಗಿಸಿದ್ದಿದೆ. ಅಂತ್ಯ ಸಂಸ್ಕಾರವನ್ನೂ ಮಾಡಲಾಗಿದೆ, ಅದರಲ್ಲಿ ಹೆಚ್ಚುಗಾರಿಕೆ ಏನಿಲ್ಲ. ನಾನೊಬ್ಬ ಸಮಾಜ ಸೇವಕನಾಗಿ ಕರ್ತವ್ಯ ಮಾಡಿದ್ದೇನೆ. ಇಂತಹ ಕೆಲಸದಿಂದ ಜನ ನನ್ನನ್ನು ಪ್ರೀತಿಸುತ್ತಾರೆ. ಇದಕ್ಕಿಂತ ಇನ್ನೇನು ಬೇಕು. ಈಗ ಜನರ ಪ್ರತಿನಿಧಿಯಾಗಿ ಸಚಿವನಾಗಿದ್ದೇನೆ. ಜನರ ಪರವಾಗಿ ಕೆಲಸ ಮಾಡಲು ಒಂದು ಅವಕಾಶ ಒದಗಿಬಂದಿದೆ. ಅದಕ್ಕೆ ಎಲ್ಲೂ ಚ್ಯುತಿ ಬಾರದ ರೀತಿ ನಿರ್ವಹಿಸುತ್ತೇನೆ ಎಂದು ವಿವರಿಸಿದರು.
1 ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂಬ ಕನಸಿತ್ತು. ಜಿಲ್ಲಾ ಪಂಚಾಯಿತಿ ಮೂಲಕ ಪ್ರಯತ್ನ ನಡೆಸಿದೆ.
2 ಶಾಸಕನಾಗುತ್ತೇನೆ ಎಂದು ಎಣಿಸಿರಲಿಲ್ಲ. ಪಕ್ಷ ನನ್ನನ್ನು ಗುರುತಿಸಿ ಸಚಿವ ಸ್ಥಾನ ನೀಡಿದೆ. ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುವೆ.
3 ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲು ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವೆ.

ಕಚೇರಿ ನವೀಕರಣ ಇಲ್ಲ

ವಿಧಾನಸೌಧದಲ್ಲಿ 343ನೇ ಸಂಖ್ಯೆ ಕೊಠಡಿ ನೀಡಲಾಗಿದೆ, ಅಲ್ಲಿ ಯಾವುದೇ ನವೀಕರಣ ಮಾಡಬಾರದು ಎಂದುಕೊಂಡಿದ್ದೇನೆ. ಒಂದೊಮ್ಮೆ ನವೀಕರಣ ಮಾಡಲೇಬೇಕೆಂದರೆ ಅದರ ರ್ಖಚನ್ನು ಸ್ವಂತವಾಗಿ ಕೊಡಬೇಕೆಂದುಕೊಂಡಿದ್ದೇನೆ. ಖಾತೆ ಹಂಚಿಕೆ ಬಳಿಕೆ ಬಸವಣ್ಣನವರ ಹೆಸರಿನಲ್ಲಿ ಸರಳವಾಗಿ ಕಚೇರಿ ಪ್ರವೇಶ ಮಾಡುತ್ತೇನೆ. ಯಾವುದೇ ಆಡಂಬರ ಇರುವುದಿಲ್ಲ. ಪ್ರತಿ ಶುಕ್ರವಾರದ ಪೂಜೆಯೂ ಇರುವುದಿಲ್ಲ ಎಂದು ಬಸವಂತಪ್ಪ ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net