ಯಾದಗಿರಿ ಕಲಬುರಗಿಯಲ್ಲಿ ಹೊಸ ಕೈಗಾರಿಕಾ ವಸಾಹತು

ಡಾ.ಅಜಯಸಿಂಗ್
ಡಾ.ಅಜಯಸಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ರು.200 ಕೋಟಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ
  • ಕೆಕೆಆರ್​ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್​ ಮಾಹಿತಿ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್​ಡಿಬಿ) ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್​ಎಸ್​ಐಡಿಸಿ) ಸಹಯೋಗದಡಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆ ವಿಸ್ತರಿಸುವುದರ ಜತೆಗೆ ವೇಗ ನೀಡಲು ಬೃಹತ್​ ಯೋಜನೆ ರೂಪಿಸಲಾಗಿದೆ.
ಎರಡೂ ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 210.58 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸುವ ಕ್ರಿಯಾಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದಿಸಿದೆ ಎಂದು ಕೆಕೆಆರ್​ಡಿಬಿ ಅಧ್ಯಕ್ಷ ಡಾ.ಅಜಯಸಿಂಗ ತಿಳಿಸಿದ್ದಾರೆ.
ಕಲಬುರಗಿಯ ನಂದೂರ(ಕೆ) ಬಳಿ 62.58 ಎಕರೆ ವಿಸ್ತೀರ್ಣದಲ್ಲಿ ಹೊಸ ಕೈಗಾರಿಕಾ ವಸಾಹತು ನಿರ್ಮಾಣವಾಗಲಿದೆ. ಅದರ ಅಭಿವೃದ್ಧಿಗೆ 61.26 ಕೋಟಿ ರೂ.ಗಳಾಗಲಿದ್ದು, ಕೆಕೆಆರ್​ಡಿಬಿ ಮತ್ತು ಕೆಎಸ್​ಎಸ್​ಐಡಿಸಿ ತಲಾ ಶೇ.50 ಅನುದಾನ ಭರಿಸಲಿವೆ.
ಯಾದಗಿರಿ ಜಿಲ್ಲೆಯಲ್ಲಿ ಎರಡು ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಯಾದಗಿರಿ ತಾಲೂಕಿನಲ್ಲಿ 96.25 ಕೋಟಿ ರೂ. ವೆಚ್ಚದ 100 ಎಕರೆ ಹಾಗೂ ಶಹಾಪುರ ತಾಲೂಕಿನ ಹಳಿಸಗರ ಬಳಿ 48 ಎಕರೆ ಪ್ರದೇಶದಲ್ಲಿ 42.56 ಕೋಟಿ ರೂ. ವೆಚ್ಚದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಳ್ಳಲಿವೆ. ಹೊಸ ಕೈಗಾರಿಕಾ ನಿವೇಶನಗಳನ್ನು ಸರ್ಕಾರದ ನಿಯಮದಂತೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಕಲ್ಯಾಣ ಕರ್ನಾಟಕದಲ್ಲಿ ಸಣ್ಣ ಕೈಗಾರಿಕೆಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ದೊರಕಿ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಅಜಯಸಿಂಗ್​ ತಿಳಿಸಿದ್ದಾರೆ.
ಕೈಗಾರಿಕೆ ಅಭಿವೃದ್ಧಿಗೆ ವೇಗ
ಕೆಕೆಆರ್​ಡಿಬಿ ಮತ್ತು ಕೆಎಸ್​ಎಸ್​ಐಡಿಸಿ ಸಹಯೋಗದಡಿ ತಲಾ 100 ಕೋಟಿ ರೂ. ವೆಚ್ಚ ಮಾಡಿ ಕಲಬುರಗಿ ಮತ್ತು ಯಾದಗಿರಿಯಲ್ಲಿ ಸ್ಥಾಪಿಸಲಿರುವ ಹೊಸ ಕೈಗಾರಿಕಾ ವಸಾಹತು ಯೋಜನೆಯಿಂದ ಈ ಭಾಗದ ಕೈಗಾರಿಕೆಗಳ ಪ್ರಗತಿಯಾಗಲಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ. ಹಿಂದುಳಿದ ಪ್ರದೇಶದಲ್ಲಿ ಉದ್ದೇಶಿತ ಕೈಗಾರಿಕಾ ವಸಾಹತು ಸ್ಥಾಪನೆಯಿಂದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಲಭಿಸಲಿದ್ದು, ಉದ್ಯಮಗಳ ಪ್ರಗತಿಯಾಗಲಿದೆ. ಕೈಗಾರಿಕೆಯಲ್ಲಿ ಕಲ್ಯಾಣ ಕರ್ನಾಟಕ ಸಬಲೀಕರಣಗೊಳ್ಳಲು ಇದು ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಪಡಿಸಿದ್ದಾರೆ.
"

ಉದ್ದೇಶಿತ ಎರಡು ಯೋಜನೆಗಳಿಗೆ ಅಭಿವೃದ್ಧಿ ವೆಚ್ಚದಲ್ಲಿ 100 ಕೋಟಿ ರೂ. ಕೆಕೆಆರ್​ಡಿಬಿ ಮತ್ತು ಉಳಿದ 100.07 ಕೋಟಿ ರೂ. ಕೆಎಸ್​ಎಸ್​ಐಡಿಸಿ ಭರಿಸಲಿದೆ. 2025-26ರ ಅಭಿವೃದ್ಧಿ ಕೆಲಸಗಳಿಗಾಗಿ ಈ ಅನುದಾನ ಮೀಸಲಿಡಲಾಗಿದೆ.

— > ಡಾ.ಅಜಯಸಿಂಗ್​ ಕೆಕೆಆರ್​ಡಿಬಿ ಅಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net