ಕಾಯ್ದೆ ಕಡ್ಡಾಯವಾಗಿ ಅನುಷ್ಠಾನಗೊಂಡರೆ ಆಗುವ ಮೊದಲ ಪ್ರಮುಖ ಬದಲಾವಣೆಯೆಂದರೆ, ಕಾಲುವೆಯ ಮಧ್ಯಭಾಗದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲದ ಬಳಕೆಗೆ ಸಂಪೂರ್ಣ ನಿಯಂತ್ರಣ ಬರಲಿದೆ. ಈ ವ್ಯಾಪ್ತಿಯಲ್ಲಿ ಹೊಸದಾಗಿ ಬಾವಿ ತೋಡಲು, ಕೊಳವೆಬಾವಿ ಕೊರೆಯಲು ಅಥವಾ ಕೃತಕ ನೀರಿನ ಸಂಗ್ರಹಣಾ ಹೊಂಡಗಳನ್ನು ನಿರ್ಮಿಸಲು ನೀರಾವರಿ ಅಧಿಕಾರಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕಾಗುತ್ತದೆ. ಅಷ್ಟೇ ಅಲ್ಲದೆ, ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲಾ ಅಂತರ್ಜಲ ಬಳಕೆದಾರರು ಮತ್ತು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳು 6 ತಿಂಗಳ ಒಳಗಾಗಿ ನೀರಾವರಿ ಅಧಿಕಾರಿಯ ಬಳಿ ತಮ್ಮ ಬೋರ್‌ವೆಲ್‌ಗಳನ್ನು ನೋಂದಣಿ ಮಾಡಿಸಬೇಕಾಗುತ್ತದೆ.