ನೂತನ CM ಆಯ್ಕೆಗೆ ಕ್ಷಣಗಣನೆ: ವಿಧಾನಸೌಧದಲ್ಲಿಂದು ಸಂಜೆ 4ಕ್ಕೆ ಹೈವೋಲ್ಟೇಜ್ ಮೀಟಿಂಗ್!

CM
CM
Published on
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮುಖ್ಯಮಂತ್ರಿ(CM) ಬದಲಾವಣೆ ಪ್ರಕ್ರಿಯೆ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ನೂತನ ಶಾಸಕಾಂಗ ಪಕ್ಷದ (CLP) ನಾಯಕನನ್ನು ಆಯ್ಕೆ ಮಾಡಲು ಇಂದು (ಮೇ 30, ಶನಿವಾರ) ಸಂಜೆ 4 ಗಂಟೆಗೆ Vidhana Soudhaದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. 
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಈಗಾಗಲೇ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಸಿದ್ದರಾಮಯ್ಯ ಅವರೇ ಉಸ್ತುವಾರಿ ಸಿಎಂ ಆಗಿ ಮುಂದುವರಿಯಲಿದ್ದಾರೆ. ಇದರ ಬೆನ್ನಲ್ಲೇ ಹೊಸ ನಾಯಕನ ಆಯ್ಕೆಯ ಕಸರತ್ತು ಚುರುಕಾಗಿದ್ದು, ಇಂದಿನ ಸಭೆಯತ್ತ ಎಲ್ಲರ ಕಣ್ಣು ನೆಟ್ಟಿದೆ.  

ಡಿಕೆಶಿ ನೂತನ ಸಾರಥಿ?

ಕಾಂಗ್ರೆಸ್ ಹೈಕಮಾಂಡ್ ಸೂತ್ರದ ಪ್ರಕಾರ, ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವುದು ಕೇವಲ ಔಪಚಾರಿಕತೆಯಷ್ಟೇ ಆಗಿರಲಿದೆ. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ.  

ದೆಹಲಿಯಲ್ಲಿ ಹೈಕಮಾಂಡ್ ಭೇಟಿ

ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನೂತನ ಸಚಿವ ಸಂಪುಟ ರಚನೆ, ಪ್ರಾದೇಶಿಕ ಮತ್ತು ಜಾತಿ ಸಮೀಕರಣಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಸುದೀರ್ಘ ಚರ್ಚೆಗಳು ನಡೆದಿವೆ.  

ಸಚಿವಾಕಾಂಕ್ಷಿಗಳಿಂದ ಲಾಬಿ ಶುರು

ಮುಖ್ಯಮಂತ್ರಿ ಬದಲಾವಣೆ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಸಂಪೂರ್ಣವಾಗಿ ಪುನಾರಚನೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಹಳೇ ಸಚಿವರ ಜೊತೆಗೆ ಹೊಸ ಮುಖಗಳಿಗೂ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದ್ದು, ಶಾಸಕರಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಲಾಬಿ ಮತ್ತು ಪೈಪೋಟಿ ಶುರುವಾಗಿದೆ. ಲಿಂಗಾಯತ, ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಹೈಕಮಾಂಡ್ ಕಸರತ್ತು ನಡೆಸಿದೆ. ಇಂದಿನ ಸಭೆಯಲ್ಲಿ ಶಾಸಕರ ಬೆಂಬಲ ಪತ್ರ ಪಡೆದ ನಂತರ, ನೂತನ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಮೂಲಗಳ ಪ್ರಕಾರ, ಬರುವ ಸೋಮವಾರದಂದು ವಿದಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net