ನೆಲಮಂಗಲ ತಾಲೂಕಿಗೆ ಶೇ.92.93 ಅಂಕ / NELAMANGAL

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ನೆಲಮಂಗಲದ ಬಿಇಒ ಕಚೇರಿ ಆವರಣದಲ್ಲಿ ಬಿಇಒ ಕೆ.ಸಿ.ರಮೇಶ್​ ಸನ್ಮಾನಿಸಿದರು. ಶಿಕ್ಷಣ ಸಂಯೋಜಕಿ ಸುಚಿತ್ರಾ ಇತರರು ಇದ್ದರು.
ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ನೆಲಮಂಗಲದ ಬಿಇಒ ಕಚೇರಿ ಆವರಣದಲ್ಲಿ ಬಿಇಒ ಕೆ.ಸಿ.ರಮೇಶ್​ ಸನ್ಮಾನಿಸಿದರು. ಶಿಕ್ಷಣ ಸಂಯೋಜಕಿ ಸುಚಿತ್ರಾ ಇತರರು ಇದ್ದರು.
Published on
ನೆಲಮಂಗಲ : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.92.93 ಫಲಿತಾಂಶ ದೊರೆತಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ ತಾಲೂಕು 4ನೇ ಸ್ಥಾನದಲ್ಲಿದೆ.
ತಾಲೂಕಿನಲ್ಲಿ ಒಟ್ಟು 2861 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2659 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳಲ್ಲಿ ನಗರದ ಮಂಜುನಾಥ, ಬಾಲಕಿಯರ ಶಾಲೆಯ ಸಮುಯ್ಯಅಂಜುಂ 619 ಅಂಕಗಳಿಸಿದ್ದು, (ಕನ್ನಡ ಮಾಧ್ಯಮ) ಜಿಲ್ಲೆಗೆ ಪ್ರಥಮ, ರಾಜ್ಯದಲ್ಲಿ 6 ಸ್ಥಾನ ಪಡೆದುಕೊಂಡಿದ್ದರೆ, ಅನುದಾನರಹಿತ ಶಾಲೆಗಳಲ್ಲಿ ದಾಬಸ್​ಪೇಟೆ ಗೀತಾ ಆಂಗ್ಲಪ್ರೌಢಶಾಲೆಯ ವಂಶಿಕಾ 618, ತ್ಯಾಮಗೊಂಡು ಜ್ಞಾನಮಂದಿರ ಪ್ರೌಢಶಾಲೆಯ ಚಂದನಾ 618 ಅಂಕಗಳಿಸಿದ್ದರೆ, ಸರ್ಕಾರಿ ಪ್ರೌಢಶಾಲೆಗಳಲ್ಲಿ ನಗರದ ಸರ್ಕಾರಿ ಜೂನಿಯರ್​ ಕಾಲೇಜು ವಿದ್ಯಾರ್ಥಿನಿ ದೀಪಶ್ರೀ 613 ಅತ್ಯಧಿಕ ಅಂಕ ಪಡೆದುಕೊಂಡಿದ್ದಾರೆ ಎಂದು ಬಿಇಒ ಕೆ.ಸಿ.ರಮೇಶ್​ ಮಾಹಿತಿ ನೀಡಿದರು.
ಬಿಇಒ ಕಚೇರಿಯಿಂದ ಅಭಿನಂದನೆ : 2025&26 ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 610ಕ್ಕೂ ಹೆಚ್ಚು ಅಂಕ ಪಡೆದ ತಾಲೂಕಿನ 12 ವಿದ್ಯಾರ್ಥಿಗಳನ್ನು ನಗರ ಬಿಇಒ ಕಚೇರಿಯಿಂದ ಸನ್ಮಾನಿಸಲಾಯಿತು.
ಶಿಕ್ಷಣ ಸಂಯೋಜಕಿ ಎಸ್​.ಎಸ್​.ಸುಚಿತ್ರಾ, ಅಕ್ಷರದಾಸೋಹ ಸಹಾಯ ನಿರ್ದೇಶಕ ನರಸಿಂಹಮೂರ್ತಿ, ಕ್ಷೇತ್ರಸಮನ್ವಯಾಧಿಕಾರಿ ಅನಿತಾ, ತಾಲೂಕು ನೋಡೆಲ್​ ಅಧಿಕಾರಿ ಗಿರೀಶ್​, ಶಿಕ್ಷಕ ಪರಮೇಶ್​, ಕೃಷ್ಣಮೂರ್ತಿ ಸೇರಿ ಸಂಪನ್ಮೂಲ ಶಿಕ್ಷಕರು, ಮುಖ್ಯಶಿಕ್ಷಕರು ಇತರರು ಇದ್ದರು.
ಹೆಚ್ಚಿದ ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶ : ತ್ಯಾಮಗೊಂಡ್ಲು (ಕಳೆದ ವರ್ಷ ಶೇ.56) ಈ ಬಾರಿ ಶೇ.85.88 ಹಾಗೂ ನೆಲಮಂಗಲ ಸರ್ಕಾರಿ ಜೂನಿಯರ್​ ಕಾಲೇಜು (ಕಳೆದ ವರ್ಷ ಶೇ.60) ಈ ಬಾರಿ ಶೇ.81.61 ಫಲಿತಾಂಶ ಬಂದಿದ್ದು, ಈ ಬಾರಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಅಂಕಿಅಂಶ ಸಹಿತ ಬಿಇಒ ಕೆ.ಸಿ.ರಮೇಶ್​ ವಿವರಿಸಿದರು.
ಶೇ.100 ಫಲಿತಾಂಶ ಪಡೆದ ಶಾಲೆಗಳು : 4 ಸರ್ಕಾರಿ ಪ್ರೌಢಶಾಲೆಗಳು, 2 ಸರ್ಕಾರಿ ವಸತಿ ಪ್ರೌಢಶಾಲೆಗಳು, 1 ಅನುದಾನಿತ, 14 ಅನುದಾನರಹಿತ ಪ್ರೌಢಶಾಲೆಗಳು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿವೆ. ತಾಲೂಕಿನ ಬೈರನಾಯಕನಹಳ್ಳಿ, ದೇವರಹೊಸಹಳ್ಳಿ, ದೊಡ್ಡಬೆಲೆ, ಸೋಲದೇವನಹಳ್ಳಿ, ವಿಶ್ವೇಶ್ವರಪುರ ಸರ್ಕಾರಿ ಪ್ರೌಢಶಾಲೆಗಳು ತಾಲೂಕಿನ ಬೈರನಾಯಕನಹಳ್ಳಿ ಮತ್ತು ಕಂಬಾಳದ ವಸತಿ ಪ್ರೌಢಶಾಲೆಗಳು, ತಾಲೂಕಿನ ಮುದ್ದಲಿಂಗನಹಳ್ಳಿ ಅಕ್ಷರ ಅಕಾಡೆಮಿ, ದಾಬಸ್​ಪೇಟೆ ಪಬ್ಲಿಕ್​ ಪ್ರೌಢಶಾಲೆ, ಗೀತಾ ಆಂಗ್ಲ ಪ್ರೌಢಶಾಲೆ, ನಗರದ ಇನ್ನವೇಟಿವ್​ ಸ್ಕೂಲ್​ ಆಫ್​ ಎಕ್ಷಲೆನ್ಸ್​ ಶಾಲೆ, ಎಂ.ಇ.ಎಸ್​. ಪ್ರೌಢಶಾಲೆ, ತ್ಯಾಮಗೊಂಡ್ಲು ನಿಸರ್ಗ ವಿದ್ಯಾನಿಕೇತನ, ಮೂಡಲಪಾಳ್ಯ ಪ್ರತಿಕ್ಷಾ ಪ್ರೌಢಶಾಲೆ, ಬೇಗೂರು ಎಸ್​.ಎಲ್​.ಆರ್​ ಪಬ್ಲಿಕ್​ ಸ್ಕೂಲ್​, ಸೌಂದರ್ಯ ನಾಲೆಜ್ಡ್​ ಪಾರ್ಕ್​, ಡಿವೈಸ್​ ಪವರ್​ ಆಂಗ್ಲಶಾಲೆ, ತ್ಯಾಮಗೊಂಡ್ಲು ತಾವರೆಕರೆ ಸರ್​.ಸಿವಿ.ರಾಮನ್​ ಪಬ್ಲಿಕ್​ ಶಾಲೆ, ನಗರದ ಸೆಂಟ್​ ಆನ್ಸ್​ ಶಾಲೆ, ಥಾಮಸ್​ ಮೆಮೊರಿಯಲ್​ ಶಾಲೆ, ವಿಶಾಲ್​ ಆಂಗ್ಲಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿವೆ.
ಗುಜರಿವ್ಯಾಪಾರಿ ಮಗಳು ತಾಲೂಕಿಗೆ ಮೊದಲು : ನಗರದಲ್ಲಿ ಗುಜರಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿರುವುದರ ಜತೆಗೆ ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಗುರುತಿಸಿಕೊಂಡಿರುವ ಸಿರಾಜ್​ ಅಹ್ಮದ್​ ಅವರ ಮಗಳು ಸುಮಯ್ಯ ಅಂಜುಂ ಕನ್ನಡ ಮಾಧ್ಯಮಲ್ಲಿ 619 ಅಂಕಗಳಿಸಿ, ರಾಜ್ಯದಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಶಿಕ್ಷಕರ ಪ್ರೋತ್ಸಾಹ ಹಾಗೂ ಪಾಲಕರ ಸಹಕಾರದಿಂದ ಹೆಚ್ಚು ಫಲಿತಾಂಶ ಪಡೆಯಲು ಸಾಧ್ಯವಾಯಿತು. ಇನ್ನು 6 ಅಂಕ ಬರಬೇಕಿತ್ತು. ನಿತ್ಯ ಅಂದಿನ ಪಾಠ ಅಂದೆ ಓದಿನ ಅರ್ಥ ಮಾಡಿಕೊಳ್ಳುತ್ತಿದ್ದೆ. ಅಪ್ಪ ಗುಜರಿ ವ್ಯಾಪಾರ ಮಾಡಿಕೊಂಡಿದ್ದರು, ಕನ್ನಡ ಭಾಷೆ ಸಾಹಿತ್ಯಾಭಿಮಾನಿಯಾಗಿರುವುದು ಹೆಮ್ಮೆಯಾಗುತ್ತಿದೆ ಎಂದು ಸುಮಯ್ಯಅಂಜುಂ ಪ್ರತಿಕ್ರಿಯೆ ನೀಡಿದ್ದಾರೆ.
ನೆರವಾದ ವಿದ್ಯಾರ್ಥಿ ಮಿತ್ರ : ಸರ್ಕಾರಿ ಶಾಲೆಗಳ ಬಗ್ಗೆ ಇರುವ ಅಭಿಪ್ರಾಯ ಬದಲಾಗಬೇಕು. ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಕಂಡು ಪಾಲಕರ ಸಲಹೆಯಂತೆ ಸರ್ಕಾರಿ ಶಾಲೆಗೆ ಸೇರಿಕೊಂಡೆ. ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂಬ ಬೇಸರವಿದೆ. ಅಷ್ಟೇನೂ ಚೆನ್ನಾಗಿ ಓದುವ ವಿದ್ಯಾರ್ಥಿ ಆಗಿರಲಿಲ್ಲ. ಆದರೆ ಶಿಕ್ಷಕರ ಪ್ರೋತ್ಸಾಹದಿಂದ ಇಷ್ಟು ಫಲಿತಾಂಶ ಪಡೆಯಲು ಹಾಗೂ ಶಾಲೆಗೆ ಸರಬರಾಜು ಆಗುತ್ತಿದ್ದ ವಿಜಯವಾಣಿ ವಿದ್ಯಾರ್ಥಿ /ಉದ್ಯೋಗ ಮಿತ್ರ ಪತ್ರಿಕೆಯೂ ಫಲಿತಾಂಶ ಪಡೆಯಲು ನೆರವಾಗಿದೆ ಎಂದು ದೀಪಶ್ರೀ ಅಭಿಪ್ರಾಯ ಹಂಚಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net