ರೈಲ್ವೆ ನೇಮಕಾತಿ ಮತ್ತು ಪರೀಕ್ಷೆಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಇದೇ ಮೊದಲೇನಲ್ಲ. 2018ರಲ್ಲಿ ರೈಲ್ವೆ ನೇಮಕಾತಿ ಮಂಡಳಿಯು ಸಹಾಯಕ ಲೋಕೋ ಪೈಲಟ್ ಮತ್ತು ಗ್ರೂಪ್-ಡಿ ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಇದು ಕರ್ನಾಟಕದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಕಾರಣವಾಯಿತು. ತೀವ್ರ ಒತ್ತಡದ ನಂತರ ರೈಲ್ವೆ ಇಲಾಖೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿತು. ರೈಲ್ವೆ ಮಾತ್ರವಲ್ಲದೆ, ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಪರೀಕ್ಷೆಗಳಲ್ಲೂ ಕನ್ನಡವನ್ನು ಕೈಬಿಡಲಾಗಿತ್ತು. ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಿಗೂ ಹೊರರಾಜ್ಯದವರೇ ಆಯ್ಕೆಯಾಗುತ್ತಿದ್ದರು. ನಂತರದ ದಿನಗಳಲ್ಲಿ ಕರ್ನಾಟಕದಾದ್ಯಂತ ನಡೆದ ಭಾಷಾ ಚಳವಳಿಯ ಫಲವಾಗಿ, ಕೇಂದ್ರ ಸರ್ಕಾರವು ಐಬಿಪಿಎಸ್ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅನುಮತಿ ನೀಡಿತು.