ಐದು ಗಂಟೆ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ

 ಸಿದ್ದಾಪುರ ಸಮೀಪ ವಿಆರ್‌ಎಲ್ ಸರಕು ಸಾಗಣೆ ವಾಹನದ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಜಖಂಗೊಂಡಿರುವುದು.
ಸಿದ್ದಾಪುರ ಸಮೀಪ ವಿಆರ್‌ಎಲ್ ಸರಕು ಸಾಗಣೆ ವಾಹನದ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಜಖಂಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತಿತಿಮತಿ ಸಮೀಪ
  • ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಖಂಡಿ
ಸಿದ್ದಾಪುರ: ತಿತಿಮತಿ ಸಮೀಪ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಖಂಡಿಸಿ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಮೈಸೂರು-ಗೋಣಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಸುಮಾರು ಐದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡು ವಿವಿಧೆಡೆ ಅಪಘಾತಗಳು ಸಂಭವಿಸಿದವು.
ಶನಿವಾರ ಬೆಳಗ್ಗೆ ಸುಮಾರು 11.15ಕ್ಕೆ ಆರಂಭವಾದ ರಸ್ತೆ ಸಂಚಾರ ತಡೆ ಸಂಜೆ 4.30ರವರೆಗೆ ಮುಂದುವರಿಯಿತು. ಕಾಡಾನೆ ದಾಳಿಗೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ಆರೋಪಿಸಿದ ಪ್ರತಿಭಟನಾಕಾರರು ತಿತಿಮತಿಯಲ್ಲಿ ಹೆದ್ದಾರಿ ಸಂಚಾರವನ್ನು ಬಂದ್ ಮಾಡಿದರು. ಇದರಿಂದ ಮೈಸೂರು-ಗೋಣಿಕೊಪ್ಪ ಮಾರ್ಗದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಯಿತು.
ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಅನೇಕ ವಾಹನಗಳು ಪರ್ಯಾಯ ಮಾರ್ಗಗಳಾದ ಪಾಲಿಬೆಟ್ಟ, ಮಾಲ್ದಾರೆ ಹಾಗೂ ಪಿರಿಯಾಪಟ್ಟಣ ರಸ್ತೆ ಮೂಲಕ ಸಂಚರಿಸಿದವು. ವಾಹನಗಳ ದಟ್ಟಣೆ ಹೆಚ್ಚಾದ ಪರಿಣಾಮ ಸಿದ್ದಾಪುರ-ಮೈಸೂರು ಮುಖ್ಯ ರಸ್ತೆಯಲ್ಲಿ ಹಲವು ಸಣ್ಣಪುಟ್ಟ ಅಪಘಾತಗಳು ಸಂಭವಿಸಿದವು. ಕೊಡಗು ಗಡಿ ವ್ಯಾಪ್ತಿಯ ಮಾಲ್ದಾರೆ ಸಮೀಪ ಅರಣ್ಯ ಪ್ರದೇಶದಲ್ಲಿ ಕಾರು ಅಪಘಾತಕ್ಕೀ ಡಾಗಿದ್ದು, ವಾಹನಕ್ಕೆ ಹಾನಿಯಾಗಿದೆ. ಇದೇ ವೇಳೆ ಸಿದ್ದಾಪುರ ಸಮೀಪ ವಿಆರ್‌ಎಲ್ ಸಂಸ್ಥೆಯ ಸರಕು ಸಾಗಣೆ ವಾಹನದ ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ. ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳಗಳಿಗೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಂಡರು. ಹೆದ್ದಾರಿ ತಡೆ ಹಾಗೂ ವಾಹನ ದಟ್ಟಣೆಯಿಂದ ದಿನಪೂರ್ತಿ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net