ರಾಷ್ಟ್ರೀಯ ರೈತ ಸಮಾವೇಶ ಜುಲೈನಲ್ಲಿ

ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ರೈತ ಸಮಾವೇಶ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​ ಮಾತನಾಡಿದರು. ಬಸವರಾಜ ದೇಶಮುಖ, ಶಿವಕಾಂತ ಮಹಾಜನ್​, ಅಶೋಕ ಗುತ್ತೇದಾರ್​, ದಯಾನಂದ ಪಾಟೀಲ್​ ಇತರರಿದ್ದರು.
ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ರೈತ ಸಮಾವೇಶ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​ ಮಾತನಾಡಿದರು. ಬಸವರಾಜ ದೇಶಮುಖ, ಶಿವಕಾಂತ ಮಹಾಜನ್​, ಅಶೋಕ ಗುತ್ತೇದಾರ್​, ದಯಾನಂದ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪ್ಪನ ಜಾತ್ರಾ ಮೈದಾನದಲ್ಲಿ ಆಯೋಜನೆ
  • ಮೂರು ದಿನದ ಕಾರ್ಯಕ್ರಮ ಯಶಸ್ಸಿಗೆ ಉಪ ಸಮಿತಿ ರಚನೆ
ಕಲಬುರಗಿ: ರೈತರನ್ನು ಸ್ವಾವಲಂಬಿ ಮಾಡುವುದರ ಜತೆ ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟುಗಳ ಪರಿಹಾರ ಕುರಿತು ಚರ್ಚಿಸಲು ನವ ಕರ್ನಾಟಕ ರೈತ ಸಂಘದ ಸಹಯೋಗದಡಿ ನಗರದಲ್ಲಿ ಮೂರು ದಿನದ ರಾಷ್ಟ್ರೀಯ ರೈತರ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ.
ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​, ಉಪಾಧ್ಯಕ್ಷರಾದ ಬಸವರಾಜ ದೇಶಮುಖ, ಶಿವಕಾಂತ ಮಹಾಜನ್​ ಹಾಗೂ ಕಾರ್ಯಾಧ್ಯಕ್ಷ ದಯಾನಂದ ಪಾಟೀಲ್​ ನೇತೃತ್ವದಲ್ಲಿ ಮಂಗಳವಾರ ಕರೆದಿದ್ದ ಸಭೆಯಲ್ಲಿ ಸಮಾಲೋಚನೆ ಬಳಿಕ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಜು.25, 26 ಮತ್ತು 27ರಂದು ಸಮಾವೇಶ ನಡೆಸಲು ನಿರ್ಧರಿಸಲಾಯಿತು. ಸಮಾವೇಶ ಅರ್ಥಪೂರ್ಣ ಹಾಗೂ ಪರಿಣಾಮಕಾರಿ ನಡೆಸಲು ಹಲವು ಸುತ್ತಿನ ಪೂರ್ವಬಾವಿ ಸಭೆ ನಡೆದಿವೆ.
ಕೃಷಿ ಕ್ಷೇತ್ರದ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ದೇಶದಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಮೇಲೆ ಬೆಳಕು ಚೆಲ್ಲಲು ಇದೇ ಮೊದಲ ಸಲ ಕಲಬುರಗಿಯಲ್ಲಿ ರಾಷ್ಟ್ರೀಯ ಮಟ್ಟದ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. 28 ರಾಜ್ಯದ ರೈತ ಮುಖಂಡರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್​ ಮತ್ತು ಶಿವಕಾಂತ ಮಹಾಜನ್​ ತಿಳಿಸಿದರು.
ಕೃಷಿಯಲ್ಲಿ ಸ್ವಸಹಾಯ ಪದ್ಧತಿ, ಆಹಾರ ಪದ್ಧತಿ ಬದಲಾವಣೆ, ಗ್ರಾಮ ಸ್ವರಾಜ್​ ಬಲವರ್ಧನೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿ ವಿಜ್ಞಾನ ತಂತ್ರಜ್ಞಾನ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು. ದೇಶದ ಪ್ರಸಿದ್ಧ ರೈತ ತಜ್ಞರು, ಮುಖಂಡರು ವಿಷಯ ಮಂಡಿಸುವರು.
ಸಮಾವೇಶದ ರೂಪುರೇಷೆ ಹಾಗೂ ಸಿದ್ಧತೆ ಜತೆ ಉಪ ಸಮಿತಿಗಳ ರಚನೆ ಸಂಬಂಧ ಸ್ವಾಗತ ಸಮಿತಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್​ ಸಭೆ ನಡೆಸಿ ಚರ್ಚಿಸಿದರು. ರೈತ ಮುಖಂಡರಾದ ಅಶೋಕ ಗುತ್ತೇದಾರ್​ ಬಡದಾಳ, ಶಿವಕುಮಾರ ಪಾಟೀಲ್​ ಸೇಡಂ ಇತರರಿದ್ದರು.
ಕೊಪ್ಪಳ-ಕನ್ಹೇರಿ ಶ್ರೀ ಸೇರಿ ಹಲವರು ಭಾಗಿ
ಮೂರು ದಿನದ ರಾಷ್ಟ್ರೀಯ ಮಟ್ಟದ ರೈತ ಸಮಾವೇಶದಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ, ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಧರ್ಮಸ್ಥಳದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಭಾಗವಹಿಸುವರು. ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ ಸಹ ಪಾಲ್ಗೊಳ್ಳುವುದು ವಿಶೇಷ. ಕೇಂದ್ರದ ಕೃಷಿ ಸಚಿವ ಶಿವರಾಜಸಿಂಗ್​ ಚೌಹಾಣ್​, ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತೀನ್​ ಗಡ್ಕರಿ, ರೈಲ್ವೆ ಮತ್ತು ಜಲಸಂಪನ್ಮೂಲ ಸಚಿವ ವಿ. ಸೋಮಣ್ಣ, ಉಕ್ಕು ಮತ್ತು ಕೈಗಾರಿಕೆ ಸಚಿವ ಎಚ್​.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಇತರ ಗಣ್ಯರು ಸಹ ಸಾಕ್ಷಿಯಾಗಲಿದ್ದಾರೆ.
ಮಾಜಿ ಸಂಸದ ಸೇಡಂ ಗೌರವಾಧ್ಯಕ್ಷ
ಪಕ್ಷಾತಿತವಾಗಿರುವ ಈ ಸಮಾವೇಶದ ಯಶಸ್ಸಿಗೆ ಎಲ್ಲರನ್ನು ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದೆ. ನವ ಕರ್ನಾಟಕ ರೈತ ಸಂದಡಿ ಆಯೋಜಿಸಿರುವ ಸಮಾವೇಶ ಅರ್ಥಪೂರ್ಣ ನಡೆಸಲು ಮಾಜಿ ಸಂಸದ ಡಾ.ಬಸವರಾಜ ಪಾಟೀಲ್​ ಅವರನ್ನು ಸಮಿತಿ ಗೌರವಾಧ್ಯರಾಗಿ ಆಯ್ಕೆ ಮಾಡಲಾಗಿದೆ. ಉದ್ಯಮಿ ಡಾ.ಭೀಮಾಶಂಕರ ಬಿಲಗುಂದಿ ಕಾರ್ಯದರ್ಶಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net