ನೇಪಥ್ಯಕ್ಕೆ ನಂಜುಂಡಪ್ಪ ವರದಿ ಅಸಮತೋಲನಕ್ಕೆ ಹೊಸ ಮದ್ದು

Nanjundappa report
Nanjundappa report
Published on
ಶಿವಾನಂದ ಹಿರೇಮಠ ಗದಗ

ರಾಜ್ಯದಲ್ಲಿ ಬೇರೂರಿರುವ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಅನುದಾನ ಹಂಚಿಕೆ ಮಾಡಲು ಇನ್ನು ಮುಂದೆ ಸರ್ಕಾರ ಪ್ರೊ. ಎಂ. ಗೋವಿಂದರಾವ್ ವರದಿಯನ್ನು ಅನುಸರಿಸಲಿದೆ. ಈ ಹಿಂದೆ ಯೋಜನೆಗಳು, ಅನುದಾನ ಹಂಚಿಕೆ, ಸಂಪನ್ಮೂಲಗಳ ಬಳಕೆ, ಮೂಲ ಸೌಕರ್ಯಗಳ ಗುಣಮಟ್ಟದ ಅಭಿವೃದ್ಧಿ ಸೇರಿದಂತೆ ವಿಶೇಷ ಪ್ರಾತಿನಿಧ್ಯ ನೀಡಲು ಅನುಸರಿಸುತ್ತಿದ್ದ ಡಾ. ಡಿ.ಎಂ. ನಂಜುಂಡಪ್ಪ ವರದಿ ಈಗ ನೇಪಥ್ಯಕ್ಕೆ ಸರಿದಿದೆ.
ರಾಜ್ಯ ಸರ್ಕಾರ ಕಳೆದ ಮಾರ್ಚ್ ತಿಂಗಳಲ್ಲಿ ಗೋವಿಂದರಾವ್ ಸಮಿತಿಯ ವರದಿಯನ್ನು ಸ್ವೀಕರಿಸಿದೆ. ಅಸಮತೋಲನ ನಿವಾರಣೆಗೆ ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 43,914 ಕೋಟಿ ರೂ. ಮೀಸಲಿಡಲು ಗೋವಿಂದರಾವ್ ಸಮಿತಿ ಶಿಫಾರಸು ಮಾಡಿದೆ. ಆರ್ಥಿಕ, ಸಾಮಾಜಿಕ ಮತ್ತು ಪ್ರಾದೇಶಿಕ ಹಿಂದುಳಿದಿರುವಿಕೆ ಆಧರಿಸಿ ಅನುದಾನ ಹಂಚಿಕೆ ಮಾಡಲು ಗೋವಿಂದರಾವ್ ವರದಿಯನ್ನೇ ಸರ್ಕಾರ ನೆಚ್ಚಿಕೊಳ್ಳಲಿದೆ.
ನೂತನ ವರದಿಯಲ್ಲಿ ತಾಲೂಕುಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ಎಂಬುದಾಗಿ ವಿಂಗಡಿಸಲಾಗಿದೆ. ನಂಜುಂಡಪ್ಪ ವರದಿಯಲ್ಲಿದ್ದ ಹಲವು ಅಭಿವೃದ್ಧಿ ತಾಲೂಕುಗಳು ಪ್ರೊ. ಗೋವಿಂದರಾವ್ ವರದಿಯಲ್ಲಿ ಹಿಂದುಳಿದ ಮತ್ತು ಅತಿ ಹಿಂದುಳಿದ ತಾಲೂಕುಗಳೆಂದು ವರ್ಗೀಕರಣವಾಗಿರುವುದು ಗಮನಾರ್ಹ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿನ ಕೈಗಾರಿಕೋದ್ಯಮ, ಶೈಕ್ಷಣಿಕ ವಲಯದ ಅಸಮತೋಲನವನ್ನು ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಬಯಲುಸೀಮೆ ಅಭಿವೃದ್ಧಿ ಮಂಡಳಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್​ಡಿಬಿ) ಬಿಡುಗಡೆಯಾದ ಅನುದಾನ ದುರ್ಬಳಕೆ ಆಗಿರುವುದು, ಮುಂದಾಲೋಚನೆ ಇಲ್ಲದೆ ಅನುದಾನವನ್ನು ಅನಗತ್ಯವಾಗಿ ಖರ್ಚು ಮಾಡಿದ್ದರಿಂದ ಅಭಿವೃದ್ಧಿಗೊಳ್ಳಬೇಕಿದ್ದ ವಲಯಗಳು ಹಿಂದುಳಿದಿರುವುದು ಮುಂತಾದ ವಿಷಯಗಳನ್ನು ವರದಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.
ಉತ್ತರ, ದಕ್ಷಿಣ ಅಸಮತೋಲನ: ವಲಯವಾರು ಒಟ್ಟಾರೆ ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಸೂರು ವಿಭಾಗ ಮೊದಲ ಸ್ಥಾನದಲ್ಲಿದ್ದು, ಕಲಬುರಗಿ ವಿಭಾಗ ಕೊನೆಯ ಸ್ಥಾನದಲ್ಲಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳಾಗಿ ಇರುವುದನ್ನು ವಿವಿಧ ಮಾನದಂಡಗಳನ್ನು ಆಧರಿಸಿ ವರದಿಯಲ್ಲಿ ತೋರಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ 8 ಜಿಲ್ಲೆಗಳ ಪೈಕಿ 6 ಕಲಬುರಗಿ ವಿಭಾಗದಲ್ಲಿ ಮತ್ತು 2 ಬೆಳಗಾವಿ ವಿಭಾಗದಲ್ಲಿವೆ. ಹಿಂದುಳಿದ 23 ಜಿಲ್ಲೆಗಳ ಪೈಕಿ 14 ಉತ್ತರ ಕರ್ನಾಟಕದಲ್ಲಿ, 9 ದಕ್ಷಿಣ ಕರ್ನಾಟಕದಲ್ಲಿ ಇವೆ. ಅಭಿವೃದ್ಧಿ ಹೊಂದಿದ 8 ಜಿಲ್ಲೆಗಳ ಪೈಕಿ 5 ಮೈಸೂರು ವಿಭಾಗದಲ್ಲಿ ಹಾಗೂ 3 ಬೆಂಗಳೂರು ವಿಭಾಗದಲ್ಲಿ ಇವೆ. ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಸೂರು ವಿಭಾಗ (0.83 ಅಂಕ) ಮೊದಲನೇ ಸ್ಥಾನದಲ್ಲಿದ್ದರೆ ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿ ನಂತರದ ಸ್ಥಾನದಲ್ಲಿವೆ. ಅತಿ ಹೆಚ್ಚು ‘ಅತ್ಯಂತ ಹಿಂದುಳಿದ ತಾಲೂಕುಗಳು’ ಉತ್ತರ ಕರ್ನಾಟಕದಲ್ಲೇ ಇದ್ದು, ದಕ್ಷಿಣ ಕರ್ನಾಟಕದಲ್ಲಿ ಯಾವುದೇ ಅತ್ಯಂತ ಹಿಂದುಳಿದ ತಾಲೂಕು ಇಲ್ಲ.
ಕೆಕೆಆರ್​ಡಿಬಿ ವೆಚ್ಚ: ಕೆಕೆಆರ್​ಡಿಬಿಯ ವಿವಿಧ ಯೋಜನೆಗಳಿಗೆ ಮಾಡಿದ ಅನುದಾನ ಹಂಚಿಕೆಯಲ್ಲಿ ನ್ಯೂನತೆಗಳಿರುವುದನ್ನು ಗೋವಿಂದರಾವ್ ಸಮಿತಿ ಪತ್ತೆ ಹಚ್ಚಿದೆ. 2013-14ರಿಂದ 2024-25ರವರೆಗಿನ ಅವಧಿಯಲ್ಲಿ ಒಟ್ಟು 19,694 ಕೋಟಿ ರೂ. ಹಂಚಿಕೆ ಆಗಿದೆ. ಅದರಲ್ಲಿ ರಸ್ತೆ ಮತ್ತು ಸೇತುವೆಗಳಿಗೆ ಶೇ. 50.08ರಷ್ಟು ಖರ್ಚು ಮಾಡಲಾಗಿದೆ. ಶಿಕ್ಷಣಕ್ಕೆ ಶೇ. 29.03ರಷ್ಟು, ಆರೋಗ್ಯ ವಲಯಕ್ಕೆ ಶೇ. 6.09ರಷ್ಟು, ನೀರು ಸರಬರಾಜಿಗೆ ಶೇ. 2.1ರಷ್ಟು ಅನುದಾನ ಹಂಚಲಾಗಿದೆ. ನೀರಾವರಿಗೆ ಮಾಡಿರುವ ವೆಚ್ಚ ಶೇ. 1ಕ್ಕಿಂತ ಕಡಿಮೆ! ಕೃಷಿ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವಲ್ಲಿ ಮತ್ತು ವಾರ್ಷಿಕ ಯೋಜನೆಗಳ ಅನುಷ್ಠಾನದಲ್ಲಿ ಕೆಕೆಆರ್​ಡಿಬಿ ವಿಫಲವಾಗಿದೆ. ಆದ್ಯತೆಗಳಿಲ್ಲದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರಿಂದ ಅನಗತ್ಯ ವೆಚ್ಚ ತಲೆದೋರಿದೆ. ಮೌಲ್ಯಮಾಪನವನ್ನು ಕೆಕೆಆರ್​ಡಿಬಿಯು ತಜ್ಞರ ಸಮಿತಿಯ ಅನುಪಸ್ಥಿತಿಯಲ್ಲಿ ನಡೆಸಿದೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗಡಿ ಭಾಗದ ದುಸ್ಥಿತಿ: ಗಡಿ ಭಾಗದ ಶಾಲೆಗಳಿಗೆ ವಾರ್ಷಿಕ ತಲಾ 20 ಸಾವಿರ ರೂ. ಮಾತ್ರ ಅನುದಾನ ಹಂಚಿಕೆ ಆಗಿದೆ. ಹೆಚ್ಚಿನ ಅನುದಾನ ಇಲ್ಲದ್ದರಿಂದ ಗಡಿ ಭಾಗದ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿದೆ. 2010ರಲ್ಲಿ ಸ್ಥಾಪಿಸಲಾದ ಈ ಸಂಸ್ಥೆಯ ವ್ಯಾಪ್ತಿಯಲ್ಲಿ 988 ಹಳ್ಳಿಗಳಿವೆ. ರಾಜ್ಯದ ಗಡಿಯೊಳಗೆ 7044 ಶಾಲೆಗಳಿದ್ದು, 2024-25ರಲ್ಲಿ 5.5 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದರು. ಶೈಕ್ಷಣಿಕ ಮೂಲಸೌಕರ್ಯ ಒದಗಿಸಲು 2016-17ರಿಂದ 2025ರವರೆಗೆ ಸರ್ಕಾರ ಪ್ರಾಧಿಕಾರದ ಮೂಲಕ 2,925 ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಅದರಲ್ಲಿ ಕೇವಲ 1,489 ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ. 50ಕ್ಕಿಂತ ಕಡಿಮೆ ಪ್ರಗತಿಯಾಗಿದೆ ಎಂದೂ ಗೋವಿಂದರಾವ್ ಸಮಿತಿ ವರದಿಯಲ್ಲಿ ತಿಳಿಸಿದೆ.

ಪೌಷ್ಟಿಕಾಂಶ ಕೊರತೆ

ರಾಜ್ಯದ ಶೇ. 35.4ರಷ್ಟು ಮಕ್ಕಳ ಬೆಳವಣಿಗೆ ಯು ಪೌಷ್ಟಿಕಾಂಶ ಕೊರತೆಯಿಂದ ಕುಂಠಿತವಾಗಿದೆ. ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರ್, ವಿಜಯನಗರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇದರ ನಿವಾರಣೆಗಾಗಿ ಸೂಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲು 1000 ಕೋಟಿ ರೂ. ಮೀಸಲಿಡಬೇಕು ಎಂದು ಗೋವಿಂದರಾವ್ ಸಮಿತಿ ಸೂಚಿಸಿದೆ.

ಗೋವಿಂದರಾವ್ ಸಮಿತಿ ಪತ್ತೆ ಹಚ್ಚಿದ ಅಂಶಗಳು

ಇಡೀ ರಾಜ್ಯದಲ್ಲೇ ಕಲಬುರಗಿ ವಿಭಾಗದಲ್ಲಿ ‘ಅತ್ಯಂತ ಹಿಂದುಳಿದ ತಾಲೂಕುಗಳು’ ಅತ್ಯಧಿಕ ಸಂಖ್ಯೆಯಲ್ಲಿದ್ದು, ಅಭಿವೃದ್ಧಿ ಹೊಂದಿದ ತಾಲೂಕುಗಳೇ ಇಲ್ಲ. 39 ಅತ್ಯಂತ ಹಿಂದುಳಿದ, 9 ಅತಿ ಹಿಂದುಳಿದ, 2 ಹಿಂದುಳಿದ ತಾಲೂಕುಗಳಿದ್ದು, ಅಭಿವೃದ್ಧಿ ಹೊಂದಿದ ಯಾವುದೇ ತಾಲೂಕುಗಳಿಲ್ಲ.
ಬೆಳಗಾವಿ ವಿಭಾಗದಲ್ಲಿ 20 ಅತ್ಯಂತ ಹಿಂದುಳಿದ, 34 ಅತಿ ಹಿಂದುಳಿದ, 14 ಹಿಂದುಳಿದ ಹಾಗೂ 4 ಅಭಿವೃದ್ಧಿ ಹೊಂದಿದ ತಾಲೂಕುಗಳಿವೆ.
ಬೆಂಗಳೂರು ವಿಭಾಗದ ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ಒಂದೂ ತಾಲೂಕು ಇಲ್ಲ. 12 ಅತಿ ಹಿಂದುಳಿದ, 23 ಹಿಂದುಳಿದ, 20 ಅಭಿವೃದ್ಧಿ ಹೊಂದಿದ ತಾಲುಕುಗಳಿವೆ.
ಮೈಸೂರು ವಿಭಾಗದಲ್ಲಿ 4 ಅತಿ ಹಿಂದುಳಿದ, 20 ಹಿಂದುಳಿದ ಹಾಗೂ 35 ಅಭಿವೃದ್ಧಿ ಹೊಂದಿದ ತಾಲೂಕುಗಳಿವೆ.
ಬಳ್ಳಾರಿ, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉದ್ದಿಮೆ, ಸೇವಾ ವಲಯ, ಆರ್ಥಿಕ ಸಂಪನ್ಮೂಲ, ಸಾಮಾಜಿಕ ಮೂಲಸೌಕರ್ಯ ವಿಭಾಗಗಳ ಅಭಿವೃದ್ಧಿಯಲ್ಲಿ ತೀವ್ರ ಕೊರತೆ ಕಾಣುತ್ತಿದೆ.
ಸರ್ಕಾರ ಸ್ಥಾಪಿಸಿರುವ ಮಲೆನಾಡು, ಬಯಲುಸೀಮೆ, ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗಳು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕೆಕೆಆರ್​ಡಿಬಿ ಸ್ಥಾಪನೆಯಿಂದ ಪ್ರಾದೇಶಿಕ ಅಭಿವೃದ್ಧಿ ಮೇಲೆ ಯಾವುದೇ ಗುಣಾತ್ಮಕ ಪರಿಣಾಮ ಆಗಿಲ್ಲ.

ಸಮಿತಿಯ ಶಿಫಾರಸುಗಳೇನು?

ಕೃಷಿ ಪ್ರಧಾನ ಜಿಲ್ಲೆಗಳಾಗಿರುವ ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ವಿಜಯನಗರ, ಯಾದಗಿರಿ, ಕಲಬುರಗಿ, ಬೀದರ್ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜಲಾನಯನ ವ್ಯವಸ್ಥೆ ಬಲವರ್ಧನೆ, ಸೂಕ್ಷ್ಮ ನೀರಾವರಿ, ಕೆರೆಗಳ ಪುನಶ್ಚೇತನ, ಮಾರುಕಟ್ಟೆ ಅಭಿವೃದ್ಧಿ, ಕೃಷಿ ಸಂಕರಣಾ ಘಟಕ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆಗೆ ಆದ್ಯತೆ.
ಹಿಂದುಳಿದ ತಾಲೂಕುಗಳಲ್ಲಿನ 8000 ಶಾಲೆಗಳಲ್ಲಿ ಪ್ರಾಥಮಿಕದಿಂದ ಪಿಯುವರೆಗೆ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವುದು. ಗಣಿಗಾರಿಕೆಯಿಂದ ಹಾನಿಗೆ ಒಳಗಾದ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆ ಸ್ಥಾಪನೆ. ರಾಜ್ಯ ದಲ್ಲಿ ಒಟ್ಟು 150 ಶಾಲೆಗಳ ಸ್ಥಾಪನೆಗೆ ಒಟ್ಟು 600 ಕೋಟಿ ವೆಚ್ಚ ಮಾಡಲು ಶಿಫಾರಸು.
ವಿಜಯನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ, ಕಲಬುರಗಿಯ ತೊಗರಿ ಮಾರುಕಟ್ಟೆ ಅಭಿವೃದ್ಧಿಗೆ ಆದ್ಯತೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪುಷ್ಪಕೃಷಿಗೆ ಆದ್ಯತೆ. ಸಂಸ್ಕರಣಾ ಘಟಕಗಳ ಬಲವರ್ಧನೆ. ಕೋಲ್ಡ್ ಸ್ಟೋರೇಜ್​ಗಳನ್ನು ಸ್ಥಾಪಿಸಿ ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡುವುದು.
ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ, ಭೀಮಾ ಏತ ನೀರಾವರಿ, ಕಲಬುರಗಿ ಜಿಲ್ಲೆಯ 6 ಜಲಾಶಯಗಳ ಯೋಜನೆ, ಕೃಷ್ಣಾ ನದಿ ಪಾತ್ರದ ಬೂದಿಹಾಳ-ಪೀರಾಪುರ ಯೋಜನೆ, ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಸೇರಿದಂತೆ ಎಲ್ಲ ಬೃಹತ್ ಮತ್ತು ಸಣ್ಣ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ತುರ್ತು ಪೂರ್ಣಗೊಳಿಸಬೇಕು.
ರಾಜ್ಯದ ನೀರಾವರಿ ಯೋಜನೆಗಳಿಗೆ ವಾರ್ಷಿಕ ಹೆಚ್ಚುವರಿ 12 ಸಾವಿರ ಕೋಟಿ ರೂ. ಹಂಚಿಕೆ ಮಾಡಿ ಕಾಲುವೆಗಳನ್ನು ಪೂರ್ಣಗೊಳಿಸಿ ಕೊನೇ ಹಂತದವರೆಗೂ ನೀರು ತಲುಪುವಂತೆ ಯೋಜನೆ ರೂಪಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net