ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಮೇ 31ರಂದು ನೇರಳೆ ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ! Namma Metro

ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಮೇ 31ರಂದು ನೇರಳೆ ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ! Namma Metro
ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಮೇ 31ರಂದು ನೇರಳೆ ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ! Namma Metro
Published on

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರ ಗಮನಕ್ಕೆ
  • ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಗಳ ನಡುವೆ ತಾತ್ಕಾಲಿಕ ವ್ಯತ್ಯಯ
  • ಅತ್ಯಗತ್ಯ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮೇ 31ರಂದು ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ
  • ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಕೇವಲ ಎರಡು ಗಂಟೆಗಳ ಸಂಚಾರ ಸ್ಥಗಿತ
ಬೆಂಗಳೂರು: ಸಿಲಿಕಾನ್ ಸಿಟಿಯ ಮೆಟ್ರೋ ( Namma Metro ) ಪ್ರಯಾಣಿಕರೇ ಗಮನಿಸಿ. ನಮ್ಮ ಮೆಟ್ರೋ ನೇರಳೆ ಮಾರ್ಗದ (Purple Line) ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸಂಚಾರದಲ್ಲಿ ಮೇ 31ರ ಭಾನುವಾರದಂದು ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ಈ ಭಾಗದಲ್ಲಿ ಅತ್ಯಗತ್ಯ ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಬಿಎಂಆರ್‌ಸಿಎಲ್ (BMRCL) ಈ ನಿರ್ಧಾರ ಕೈಗೊಂಡಿದೆ.

ಅತ್ತಿಗುಪ್ಪೆ-ವಿಜಯನಗರ ನಡುವೆ ಕಾಮಗಾರಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಪ್ರಕಟಣೆಯ ಪ್ರಕಾರ, ನೇರಳೆ ಮಾರ್ಗದ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಕಾಮಗಾರಿಗಳನ್ನು ಯಾವುದೇ ಅಡೆತಡೆಯಿಲ್ಲದೆ, ಸುಗಮವಾಗಿ ನಿರ್ವಹಿಸುವ ಉದ್ದೇಶದಿಂದ ರೈಲು ಸಂಚಾರವನ್ನು ಭಾಗಶಃ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ನಿಗಮ ತಿಳಿಸಿದೆ.

ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸಂಚಾರ ಸ್ಥಗಿತ

ಮೇ 31ರ ಭಾನುವಾರ ಬೆಳಗ್ಗೆ 07:00 ಗಂಟೆಯಿಂದ 09:00 ಗಂಟೆಯವರೆಗೆ ಕೇವಲ ಎರಡು ಗಂಟೆಗಳ ಕಾಲ ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಆದರೆ, ಈ ಅವಧಿಯಲ್ಲಿ ಸಂಬಂಧಪಟ್ಟ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 7 ಗಂಟೆಗೆ ಎಂದಿನಂತೆ ನಿಯಮಿತ ವೇಳಾಪಟ್ಟಿಯಂತೆ ಮೆಟ್ರೋ ಸೇವೆಗಳು ಪ್ರಾರಂಭವಾಗಲಿವೆ.

ಯಾವೆಲ್ಲಾ ಮಾರ್ಗಗಳಲ್ಲಿ ಸಂಚಾರ ಇರಲಿದೆ?

ಸಂಚಾರ ಸ್ಥಗಿತದ ಅವಧಿಯಲ್ಲಿ ಕೆಳಕಂಡ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ:
* ಚಲ್ಲಘಟ್ಟ - ಮೈಸೂರು ರಸ್ತೆ
* ಕೆಂಪೇಗೌಡ (ಮೆಜೆಸ್ಟಿಕ್) - ವೈಟ್‌ಫೀಲ್ಡ್ (ಕಾಡುಗೋಡಿ)
* ಮಾದಾವರ - ಸಿಲ್ಕ್ ಇನ್‌ಸ್ಟಿಟ್ಯೂಟ್
* ಆರ್.ವಿ. ರಸ್ತೆ - ಬೊಮ್ಮಸಂದ್ರ

9 ಗಂಟೆಯ ನಂತರ ಎಂದಿನಂತೆ ಸಂಚಾರ ಆರಂಭ

ಕಾಮಗಾರಿ ಮುಕ್ತಾಯಗೊಂಡ ನಂತರ, ಅಂದರೆ ಬೆಳಗ್ಗೆ 09:00 ಗಂಟೆಯಿಂದ ಸಂಪೂರ್ಣ ನೇರಳೆ ಮಾರ್ಗದಲ್ಲಿ (ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಗಳ ನಡುವಿನ ಭಾಗ ಸೇರಿದಂತೆ) ಸಾಮಾನ್ಯ ಮೆಟ್ರೋ ಸೇವೆಗಳು ಪುನರಾರಂಭಗೊಳ್ಳಲಿವೆ. ಪ್ರಯಾಣಿಕರು ಈ ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕು ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ವಿನಂತಿಸಿದ್ದಾರೆ ಹಾಗೂ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net