ಮುಸ್ಲಿಂರಿಲ್ಲದ ಊರಲ್ಲಿ ಮೊಹರಂ ವೈಭವ

ಹೈದರನಗರದ ಮಸೀದಿಯಲ್ಲಿ ಪ್ರತಿಷ್ಠಾಪಿಸಿರುವ ಅಲಾಯಿ ದೇವರುಗಳು.
ಹೈದರನಗರದ ಮಸೀದಿಯಲ್ಲಿ ಪ್ರತಿಷ್ಠಾಪಿಸಿರುವ ಅಲಾಯಿ ದೇವರುಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕೋಮು ಸೌಹಾರ್ದತೆಗೆ ಕೈಗನ್ನಡಿ ಹೈದರನಗರ
  • 30 ವರ್ಷದ ಹಿಂದೆಯೇ ಮಸೀದಿ ನಿರ್ಮಾಣ
ಅಳವಂಡಿ: ಜಾತಿ, ಧರ್ಮಗಳ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಇಂದಿನ ದಿನಗಳಲ್ಲಿ, ಮುಸ್ಲಿಮರ ಅಲಾಯಿ ದೇವರನ್ನು ಸ್ಥಾಪಿಸುವ ಮೂಲಕ ಹೈದರನಗರ ಗ್ರಾಮಸ್ಥರು ಮಾನವಧರ್ಮ ಒಂದೇ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೈದರನಗರದಲ್ಲಿ ಮುಸ್ಲಿಂ ಕುಟುಂಬದವರು ಇಲ್ಲ. ಆದರೂ ಇಲ್ಲಿರುವ ಹಿಂದುಗಳೇ ಮುಂದಾಗಿ ಪರಂಪರಯಂತೆ ಮೊಹರಂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಹೈದರನಗರಲ್ಲಿ 350 ಕುಟುಂಬಗಳಿದ್ದು 1500 ಜನಸಂಖ್ಯೆ ಇದೆ. ಶೇ.90 ಲಂಬಾಣಿ, ಶೇ.10 ಉಳಿದ  ಸಮುದಾಯದವರಿದ್ದಾರೆ.
ಕೋಮು ಸೌಹಾರ್ದತೆ, ಜಾತ್ಯತೀತ ವ್ಯವಸ್ಥೆ ನಂಬಿರುವ ಗ್ರಾಮಸ್ಥರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. 
ಮೊಹರಂ ಅಂಗವಾಗಿ ಉಪವಾಸ, ಮಕ್ಕಳಿಗೆ ಲಾಡಿ ಹಾಕಿಸುವುದು, ದೇವರಿಗೆ ನೇವೈದ್ಯ ಅರ್ಪಣೆ, ಅಲಂಕಾರ, ಮನರಂಜನೆಯ ವೇಷ ಹಾಕುವುದು, ದಾಸೋಹ ಸೇವೆ ಆಚರಿಸುತ್ತಿದ್ದಾರೆ.
ಹಿಂದುಗಳೇ 30 ವರ್ಷಗಳ ಹಿಂದೆ ಗ್ರಾಮದಲ್ಲಿ ಮಸೀದಿ ಕಟ್ಟಿಸಿದ್ದು, ಒಂದು ವರ್ಷವೂ ಬಿಡದೆ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ಮುಸ್ಲಿಮರಿಲ್ಲದ ಕಾರಣ ಬೆಳಗಟ್ಟಿಯ ಇಮಾಮ್ ಸಾಬ್ ಹುಡೇದಮನಿ ಮೊಹರಂ ಸಮಯದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಿದ್ದಾರೆ.

ಹೈದರನಗರದಲ್ಲಿ ಮುಸ್ಲಿಮರಿಲ್ಲ. ಆದರೂ ಮೊಹರಂ ಆಚರಣೆ ಬಿಟ್ಟಿಲ್ಲ. ಗ್ರಾಮಸ್ಥರೆಲ್ಲ ಸೇರಿ ವಿಧಿವಿಧಾನದಂತೆಯೇ ವಿಜೇಂಭಣೆಯಿಂದ ಹಬ್ಬ ಚರಿಸಿಕೊಂಡು ಬರುತ್ತಿದ್ದೇವೆ.

— ಸಣ್ಣಮಲ್ಲಪ್ಪ ಚೌಡಕಿ, ಹೈದರನಗರ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net