ಏಮ್ಸ್‌ನ ತಜ್ಞರ ತಂಡ ಜಯದೇವ ಆಸ್ಪತ್ರೆಗೆ ಭೇಟಿ

ಜಯದೇವ ಆಸ್ಪತ್ರೆಯಲ್ಲಿ ಏಮ್ಸ್ ತಜ್ಱರ ತಂಡ
ಜಯದೇವ ಆಸ್ಪತ್ರೆಯಲ್ಲಿ ಏಮ್ಸ್ ತಜ್ಱರ ತಂಡ
Published on

ಪ್ರಮುಖ ಮುಖ್ಯಾಂಶಗಳು

  • * ಏಮ್ಸ್‌ನಲ್ಲಿ ಜಯದೇವ ಆಸ್ಪತ್ರೆಯ ಕಾರ್ಯವಿಧಾನಗಳ ಅಳವಡಿಕೆ: ಡಾ. ಶ್ರೀನಿವಾಸ್ ಮದ್ದೂರು
  • * ಜಯದೇವ ಮತ್ತು ಏಮ್ಸ್ ನಡುವೆ ಒಪ್ಪಂದದ ಮೇರೆಗೆ ಸಂಶೋಧನೆಗೆ ಚಿಂತನೆ
ಬೆಂಗಳೂರು: ಜಾಗತಿಕ ಮನ್ನಣೆ ಪಡೆದಿರುವ ಜಯದೇವ ಹೃದ್ರೋಗ ಸಂಸ್ಥೆಯ ಕೆಲವು ಕಾರ್ಯವಿಧಾನಗಳನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಅಳವಡಿಸಿಕೊಳ್ಳುವುದಾಗಿ ಏಮ್ಸ್‌ನ ನಿರ್ದೇಶಕ ಡಾ. ಶ್ರೀನಿವಾಸ್ ಮದ್ದೂರು ತಿಳಿಸಿದ್ದಾರೆ.
ಜಯದೇವ ಆಸ್ಪತ್ರೆಗೆ ಶುಕ್ರವಾರ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಅಳವಡಿಸಿಕೊಂಡಿರುವ ವೈದ್ಯಕೀಯ ಉಪಕರಣಗಳು, ಚಿಕಿತ್ಸೆ, ಸೇವೆ ಮತ್ತು ಆರೈಕೆಗಳ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಜಯದೇವ ಆಸ್ಪತ್ರೆಯ ತಜ್ಞರ ತಂಡವೂ ಒಮ್ಮೆ ದೆಹಲಿಯ ಏಮ್ಸ್‌ಗೆ ಆಗಮಿಸಿ ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಳ್ಳಿ ಎಂದು ಆಹ್ವಾನ ನೀಡಿದರು.
ಏಮ್ಸ್‌ನಲ್ಲಿ ರೋಬಾಟಿಕ್ ಸರ್ಜರಿ ಮತ್ತು ಎಐ ತಂತ್ರಜ್ಞಾನ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಏಮ್ಸ್ ವತಿಯಿಂದ ಜಯದೇವ ಆಸ್ಪತ್ರೆ ತಜ್ಞರಿಗೆ ತರಬೇತಿ ನೀಡುವ ಮೂಲಕ ತಂತ್ರಜ್ಞಾನ ವಿನಿಯಮ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಏಮ್ಸ್ ಮತ್ತು ಜಯದೇವ ಸೇರಿ ಒಪ್ಪಂದದ ಮೇರೆಗೆ ಹೆಚ್ಚು ಸಂಶೋಧನೆಗಳನ್ನು ಮಾಡುವ ಆಲೋಚನೆ ಹೊಂದಿರುವುದಾಗಿ ತಿಳಿಸಿದರು.
ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಬಿ. ದಿನೇಶ್ ಮಾತನಾಡಿ, ಏಮ್ಸ್ ನಿರ್ದೇಶಕರ ಸಲಹೆಯಂತೆ ವೈದ್ಯರ ತಂಡವನ್ನು ಏಮ್ಸ್‌ಗೆ ಕಳುಹಿಸಿಕೊಡುವುದಾಗಿ ಹಾಗೂ ಅಲ್ಲಿನ ಕಾರ್ಯವೈಖರಿ ಮತ್ತು ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳುವುದಾಗಿ ಹೇಳಿದರು. ಇದೇ ವೇಳೆ ಏಮ್ಸ್ ತಜ್ಞರ ತಂಡಕ್ಕೆ ಧನ್ಯವಾದ ಅರ್ಪಿಸಿದರು.
ಈ ವೇಳೆ ಏಮ್ಸ್‌ನ ನಿರ್ದೇಶಕರು ಸೇರಿ ತಂಡದಲ್ಲಿದ್ದ ಆಡಳಿತ ವಿಭಾಗದ ಪ್ರಾಧ್ಯಾಪಕ ಡಾ. ಮಹೇಶ್, ಸಹ ಪ್ರಾಧ್ಯಾಪಕಿ ಕನಿಕಾ ಜೈನ್, ಆಡಳಿತ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಅಕ್ಷಯ್ ಕುಮಾರ್, ನರಶಸಚಿಕಿತ್ಸಾ ಪ್ರಾಧ್ಯಾಪಕ ಡಾ. ವಿವೇಕ್ ತಂಡನ್, ಜಯದೇವ ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net