ಬಂಕಿಮಚಂದ್ರ ಚಟರ್ಜಿ ಅವರು 1875ರಲ್ಲಿ ತಮ್ಮ ಆನಂದಮಠ ಕೃತಿಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ರಚಿಸಿದ್ದಾರೆ. ಈ ಗೀತೆ ಅನೇಕ ಕ್ರಾಂತಿಕಾರಿಗಳಿಗೆ ಧ್ಯೇಯ ಗೀತೆಯಾಗಿತ್ತು. ಪ್ರೇರಣೆಯಾಗಿತ್ತು. 1905ರಲ್ಲಿ ಬಂಗಾಳ ವಿಭಜನೆ ಸಂದರ್ಭ ಈ ಗೀತೆಯ ಸಾಲುಗಳು ಪ್ರಮುಖ ಘೋಷಣೆಗಳಾಗಿದ್ದವು. ಸ್ವಾತಂತ್ರೃ ಹೋರಾಟಗಾರರಿಗೆ ಚೈತನ್ಯ ಕೊಟ್ಟಿದ್ದ ಈ ಗೀತೆಗೆ ಕಾಂಗ್ರೆಸ್ ಸ್ವಾತಂತ್ರೃ ಪೂರ್ವದಿಂದಲೂ ವಿರೋಧಿಸುತ್ತಲೇ ಬಂದಿದೆ. 1923ರಲ್ಲಿ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಪಂಡಿತ ವಿಷ್ಣು ದಿಗಂಬರ ಪಲುಸ್ಕರ್ ಹಾಡಲು ಎದ್ದು ನಿಂತಾಗ, ಇಸ್ಲಾಂ ಪ್ರಕಾರ ಹಾಡುವುದು ನಿಷಿದ್ಧ ಎಂದು ಕೆಲ ಮುಸ್ಲಿಂ ಮುಖಂಡರು ವಿರೋಧಿಸಿದರು. ಆಗ ಪಲುಸ್ಕರ್, ಇದು ರಾಷ್ಟ್ರೀಯ ಸಭೆ, ಕೋಮಿನ ಸಭೆಯಲ್ಲ ಎಂದು ದಿಟ್ಟತನದಿಂದ ಹಾಡಿದ್ದರು. ಹೀಗೆ ಆರಂಭದಿಂದಲೂ ಕಾಂಗ್ರೆಸ್ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ ಎಂದರು.